ಶಿವಮೊಗ್ಗ: ಅಪಾರವಾದ ಕಾವ್ಯ, ಕಥನ ಸಂಪತ್ತು, ಸಾಹಿತ್ಯ ಪ್ರಕಾರಗಳ ಕನ್ನಡ ಭಾಷಾ ಸಾಹಿತ್ಯವು ಭಾರತೀಯ ಭಾಷೆಗಳು ಸೇರಿದಂತೆ ಜಗತ್ತಿನ ಹಲವು ಭಾಷೆಗಳಿಗೆ ಅನುವಾದಗೊಳ್ಳಬೇಕಿದೆ ಎಂದು ಮದ್ರಾಸ್ ವಿವಿ ಪ್ರಾಧ್ಯಾಪಕಿ ಡಾ. ತಮಿಳ್ ಸೆಲ್ವಿ ಅಭಿಪ್ರಾಯಪಟ್ಟರು.
ಕುವೆಂಪು ವಿವಿ ಕನ್ನಡ ಭಾರತಿ ಮತ್ತು ಬೆಂಗಳೂರಿನ ಸಪ್ನ ಬುಕ್ ಹೌಸ್ ವತಿಯಿಂದ ಕುವೆಂಪು ವಿವಿಯ ಪ್ರೊ. ಹಿರೇಮಠ ಸಭಾಂಗಣದಲ್ಲಿ ಇಂದು ಆಯೋಜಿಸಿದ್ದ ಆಚಾರ್ಯ ಹಂಪನಾ ವಿರಚಿತ 'ಸ್ಪೆಕ್ಟ್ರಂ ಆಫ್ ಕ್ಲಾಸಿಕಲ್ ಲಿಟರೇಚರ್ ಇನ್ ಕರ್ನಾಟಕ-5' ಕೃತಿಗಳ ಲೋಕಾರ್ಪಣೆ ಮತ್ತು ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಕೃತಿಗಳ ಕುರಿತು ಮಾತನಾಡಿದರು.
ಪಂಪನಿಂದ ಕುವೆಂಪುವರೆಗೆ ಕನ್ನಡ ಸಾಹಿತ್ಯವು ಯಥೇಚ್ಛ ಗದ್ಯ-ಪದ್ಯ, ಕವನ, ಕಾವ್ಯ, ಕಥನ ಸಂಕಲನ, ವಚನ ಸಂಪತ್ತು ಒಳಗೊಂಡಿದೆ. ಅವುಗಳನ್ನು ನೆರೆಯ ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಹಿಂದಿ ಭಾಷೆಗಳಿಗೆ ಅನುವಾದಿಸಿ ಪರಿಚಯಿಸುವ ಮೂಲಕ ನಮ್ಮ ಸಾಹಿತ್ಯದ ಜ್ಞಾನವನ್ನು, ಆಳ-ಉದಾತ್ತತೆ ತಿಳಿಸಿಕೊಡಬೇಕು. ಇಲ್ಲವಾದಲ್ಲಿ ಕನ್ನಡ ಭಾಷೆಯ ಶಾಸ್ತ್ರೀಯ ಸ್ಥಾನಮಾನ ಕುರಿತು ಭವಿಷ್ಯದಲ್ಲಿ ಪ್ರಶ್ನೆಗಳು ಏಳುತ್ತವೆ ಎಂದರು.
ನಾಡೋಜ ಪ್ರೊ. ಹಂಪನಾ ಮಾತನಾಡಿ, ಕನ್ನಡ ಸಾಹಿತ್ಯ ಇತಿಹಾಸ ಎಂದರೆ ಆದಿಕವಿ ಎಂಬ ಕಾರಣಕ್ಕೆ ಪಂಪನಿಂದ ಆರಂಭಿಸಬೇಡಿ. ಪಂಪನಿಗಿಂತಲೂ 100 ವರ್ಷಕ್ಕಿಂತ ಮೊದಲೇ ಕವಿರಾಜಮಾರ್ಗ ಮೂಲಕ ಶ್ರೀವಿಜಯ ಉತ್ಕೃಷ್ಟ ಸಾಹಿತ್ಯ ನೀಡಿದ್ದ. ಕನ್ನಡ ಸಾಹಿತ್ಯದಲ್ಲಿ ಹತ್ತಾರು ಪ್ರಕಾರಗಳು ಇದ್ದು, ಸಮಾನತೆ, ವಿಶ್ವಮಾನವ ತತ್ವ, ಸಹೋದರತ್ವ ಬೋಧಿಸಿದ ಅಪಾರವಾದ ಸಿರಿ ಸಂಪತ್ತು ಇದೆ.
ಪಂಪನ ತಮ್ಮ ಜೀನವಲ್ಲಭ ತೆಲುಗು ಸಾಹಿತ್ಯದಲ್ಲಿ ಆದಿಕವಿ ಎಂದು ಕರೆಸಿಕೊಂಡಿದ್ದಾನೆ. ಅವನು ಕನ್ನಡ, ತೆಲುಗು, ಸಂಸ್ಕೃತದಲ್ಲಿ ಬರೆಸಿದ ಅಪರೂಪದ ತ್ರಿಭಾಷಾ ಶಾಸನ ಅಂಧ್ರಪ್ರದೇಶ ಕರೀಂನಗರದ ಬಳಿ ದೊರೆತಿತ್ತು. ಕನ್ನಡ ಭಾಷೆ, ಸಾಹಿತ್ಯ, ಕಾವ್ಯ, ಸಂಸ್ಕೃತಿಗೆ ಆಳವಾದ, ವಿಶ್ವವ್ಯಾಪಿಯಾಗಬಲ್ಲಂತಹ ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.
PublicNext
28/09/2022 09:12 pm