ಮಂಗಳೂರು: ಮಣ್ಣಿನ ಸಾರಸತ್ವವನ್ನು ಅರಿಯಲು ಸಾಧ್ಯವಾಗುವಂತಹ 'ಅಗ್ರಿಬೋಟ್' ಸಾಧನವನ್ನು ಮಂಗಳೂರಿನ ದ್ವಿತೀಯ ಪಿಯುಸಿಯ ವಿದ್ಯಾರ್ಥಿ ಅಭಿವೃದ್ಧಿಪಡಿಸಿದ್ದಾರೆ.
ನಗರದ ಎಕ್ಸ್‌ಪರ್ಟ್ ಕಾಲೇಜಿನ ದ್ವಿತೀಯ ಪಿಯುಸಿಯ ವಿದ್ಯಾರ್ಥಿ ಸಾರ್ಥಕ್ ಎಸ್ ಕುಮಾರ್ ಎಂಬವರು 'ಅಗ್ರಿಬೋಟ್' ಮೂಲ ಮಾದರಿ ಸಾಧನವನ್ನು ಅಭಿವೃದ್ಧಿ ಪಡಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡುವ ಆಪ್ ಒಂದನ್ನು ಕೂಡ ಸ್ವತಃ ಸಾರ್ಥಕ್ ಅವರೇ ಅಭಿವೃದ್ದಿ ಪಡಿಸಿದ್ದಾರೆ.
ವಿಶೇಷತೆ:
ಈ ಹಿಂದೆ ರೈತರು ತಮ್ಮ ಭೂಮಿಯ ಮಣ್ಣಿನ ಮಾದರಿಯನ್ನು ಲ್ಯಾಬ್‌ಗೆ ಕಳುಹಿಸಿ ಅದರ ವರದಿ ಲಭಿಸುವವರೆಗೂ ಕಾದು ಬಳಿಕ ಕೃಷಿ ಮಾಡಬೇಕಾಗಿತ್ತು. ಆದರೆ ಈ ಮೂಲ ಮಾದರಿ ಸಾಧನದಿಂದಾಗಿ ರೈತರು ತಾವಿರುವಲ್ಲಿಯೇ ತಮ್ಮ ಭೂಮಿಯ ಮಣ್ಣಿನ ಸಾರಸತ್ವವನ್ನು ಕೂಡಲೇ ಅರಿಯಬಹುದಾಗಿದೆ.
ಈ ಕುರಿತು ಮಾಹಿತಿ ನೀಡಿರು ಸಾರ್ಥಕ್, "ಹೊಲದ ಮಣ್ಣಿನ ಸಾರಸತ್ವವನ್ನು ತಿಳಿಯಬೇಕಾದರೆ ರೈತರು ಮಣ್ಣಿನ ಮಾದರಿಯನ್ನು ಕೃಷಿ ಇಲಾಖೆಗೆ ಕಳುಹಿಸಬೇಕಾಗುತ್ತದೆ. ಇದರ ವರದಿ ಲಭಿಸುವಾಗ ತಡವಾದ್ದಲ್ಲಿ ಕೃಷಿ ಮಾಡಲು ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ. ಆ ಸಮಸ್ಯೆ ನಿವಾರಣೆಗಾಗಿ ಈ ಸಾಧನ ತಯಾರಿಸಲಾಗಿದೆ. 2019ರಲ್ಲಿ ಎನ್‌ಐಟಿಕೆಯಲ್ಲಿ ನಡೆದ ಸ್ಪರ್ಧೆಗೆಂದು ಈ ಸಾಧನವನ್ನು ನಾನು ಹಾಗೂ ನನ್ನ ಸ್ನೇಹಿತ ನಿಖಿಲ್ ಗಿರೀಶ್ ಜೊತೆಯಾಗಿ ಸೇರಿ ಇದನ್ನು ತಯಾರಿಸಿದೆವು" ಎಂದು ಹೇಳಿದರು.
ಇದು ಮೊದಲ ಮಾದರಿಯಾಗಿದ್ದು ಇದನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ರೈತರಿಗೆ ತಲುಪಿಸಲಾಗುತ್ತದೆ. ಇದಕ್ಕೆ ಕೃಷಿ ಇಲಾಖೆಯಿಂದಲೂ ಸಹಾಯ ಬೇಕಾಗಿದೆ. ಜೊತೆಗೆ ಅಗ್ರಿಬೋಟ್ ಪೂರಕ ಮಾಹಿತಿ ನೀಡಲು ಆಯ್ಯಪ್ ಒಂದನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು.
PublicNext
13/10/2020 04:47 pm