ಬೆಳಗಾವಿ: ಎಲ್ಲ ಸ್ವಾಮಿಜೀಗಳು ಅವರೇ.. ಎಂದು ಇಬ್ಬರು ಮಹಿಳೆಯರು ಮಾತನಾಡಿರುವ ಆಡಿಯೋ ವೈರಲ್ ಆಗಿತ್ತು. ಆ ಆಡಿಯೋದಲ್ಲಿ ತಮ್ಮ ಹೆಸರು ಉಲ್ಲೇಖವಾಗಿದ್ದರಿಂದ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದ ಬೈಲಹೊಂಗಲ ತಾಲ್ಲೂಕಿನ ನೇಗಿನಹಾಳ ಗ್ರಾಮದ ಗುರು ಮಡಿವಾಳೇಶ್ವರಮಠದ ಬಸವಸಿದ್ಧಲಿಂಗ ಸ್ವಾಮೀಜಿ ಅವರ ಅಂತ್ಯಕ್ರಿಯೆ ಭಕ್ತ ಸಾಗರ ಮದ್ಯ ಮಂಗಳವಾರ ನೆರವೇರಿತು.
ಮರಣೋತ್ತರ ಪರೀಕ್ಷೆ ಬಳಿಕ ಸ್ವಾಮೀಜಿ ಅವರ ಕಳೇಬರವನ್ನು ಸೋಮವಾರ ರಾತ್ರಿ ಮಠಕ್ಕೆ ತರಲಾಗಿತ್ತು. ಮದ್ಯರಾತ್ರಿಯಿಂದ ಬೆಳಗಿನ ಜಾವದವರೆಗೆ ಅಪಾರ ಸಂಖ್ಯೆಯ ಜನ ತಂಡೋಪ, ತಂಡವಾಗಿ ಬಂದು ಪ್ರಾಥಿ ಶರೀರದ ದರ್ಶನ ಪಡೆದರು. ಸಾಗರದಂತೆ ಹರಿದು ಬಂದು ಭಕ್ತ ಸಮೂಹವನ್ನು, ಪೊಲೀಸರು ಮಠದ ಹಿರಿಯರು ಪೂಜ್ಯರ ಅಂತಿಮ ದರ್ಶನಕ್ಕೆ ಸುವ್ಯವಸ್ಥೆ ಮಾಡಿ ಸರದಿಯಲ್ಲಿ ನಿಂತು ದರ್ಶನ ಪಡೆಯುವಂತೆ ಸೂಕ್ತ ವ್ಯವಸ್ಥೆ ಮಾಡಿದರು.
ಮಠದ ಆವರಣದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀಗಳ ಪಾರ್ಥಿವ ಶರೀರದ ಭವ್ಯ ಮೆರವಣಿಗೆ ನಡೆಯಿತು. ದಾರಿಯುದ್ದಕ್ಕೂ ಸಹಸ್ರಾರು ಭಕ್ತರು, ಗ್ರಾಮಸ್ಥರು ಕೈ ಮುಗಿದು, ಹೂವು ಮಾಲೆ ಅರ್ಪಿಸಿ ಧನ್ಯತಾ ಭಾವ ಸಲ್ಲಿಸಿದರು.
ಪ್ರತಿಯೊಬ್ಬರಿಗೆ ಸ್ವಾಮೀಜಿ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಟ್ಟರು. ಎಲ್ಲರು ಭಕ್ತಿಯಿಂದ ಕೈಮುಗಿಯುತ್ತ ಪೂಜ್ಯರ ಅಂತಿಮ ದರ್ಶನ ಪಡೆದರು.
ಗದಗ ಡಂಬಳದ ಡಾ.ಸಿದ್ಧರಾಮ ಸ್ವಾಮೀಜಿ, ನಿಜಗುಣಾನಂದ ಸೇರಿದಂತೆ ರಾಜ್ಯದ ಪ್ರತಿಷ್ಠಿತ ಮಠಗಳ ಮಠಾಧೀಶರು ಹಾಗೂ ಶಾಸಕ ಮಹಾಂತೇಶ ದೊಡ್ಡಗೌಡರ, ಮಾಜಿ ಶಾಸಕ ಡಿ.ಬಿ.ಇನಾಮದಾರ ಅನೇಕರು ಅಂತಿಮ ದರ್ಶನ ಪಡೆದುಕೊಂಡರು. ಬಸವ ಸೇನೆ ಮುಖ್ಯಸ್ಥರು ಪೂಜ್ಯರ ಅಂತ್ಯಕ್ರಿಯೆ ವಿಧಿ, ವಿಧಾನಗಳ ಯಶಸ್ವಿಗೆ ಶ್ರಮಿಸಿದರು.
PublicNext
06/09/2022 07:43 pm