ಬೆಳಗಾವಿ: ಬೆಳಗಾವಿ ನಗರದಲ್ಲಿ ಕಳೆದ ಒಂದು ತಿಂಗಳಿನಿಂದ ಸೆರೆ ಸಿಗದೆ ಸತಾಯಿಸುತ್ತಿರುವ ಚಿರತೆಯಿಂದ ಸುಸ್ತಾದ ಅರಣ್ಯ ಇಲಾಖೆಯವರು, ಚಿರತೆ ಮರಳಿ ಕಾಡಿಗೆ ಹೋಗಿರಬಹುದೆಂದು ಉಹಿಸಿ ಅಧಿಕೃತವಾಗಿ ತಮ್ಮ ಕೊಂಬಿಗ್ ಕಾರ್ಯಚರಣೆ ಕೈ ಬಿಟ್ಟಿದ್ದಾರೆ. ಆದರೆ ಇಲ್ಲೊಬ್ಬರು ಮಾತ್ರ ಚಿರತೆ ಬೇಗ ಸಿಗಲಿ ಅಂತಾ ಚಿರತೆಗೆ ಪೂಜೆ ಮಾಡುತ್ತಿದ್ದಾರೆ.
ಹೌದು.. ಹೀಗೆ ಕಳೆದ ಒಂದು ವಾರದಿಂದ ಗಣೇಶನ ಪಕ್ಕದಲ್ಲಿ ಹೀಗೆ ಹಾಯಾಗಿ ಕುಳಿತುಕೊಂಡು ಗಣೇಶೋತ್ಸವದಲ್ಲಿ ಗಣಪನಿಗೆ ಸಿಗುತ್ತಿರುವ ಎಲ್ಲ ಪೂಜಾ ವಿಧಾನಗಳು ಇದೀಗ ಚಿರತೆಗೆ ಸಿಗುತ್ತಿವೆ. ವಿಶ್ವೇಶ್ವರಯ್ಯ ನಗರದ ಕಾರ್ತಿಕ ಶಿವಾಜಿ ಪೋಲೆಣ್ಣವರ್ ಮನೆಯಲ್ಲಿ ಗಣೇಶ ಮೂರ್ತಿ ಜೊತೆಗೆ ಚಿರತೆ ಭಾವಚಿತ್ರ ಇರೋ ಗೊಂಬೆಯನ್ನ ಇಟ್ಟು ಗಣೇಶನ ಜೊತೆಗೆ ಪೂಜೆ ಮಾಡುತ್ತಿದ್ದಾರೆ. ಮಾಯಾವಿ ಚಿರತೆ ಸಿಗದ ಕಾರಣ ಜನರು ಚಿರತೆ ಕುರಿತಾಗಿ ನಾನಾ ಬಗೆಬಗೆಯ ಟ್ರೋಲ್‌ಗಳನ್ನ ಮಾಡಿ ವೈರಲ್ ಮಾಡುತ್ತಿದ್ದರು. ಈಗ ಚಿರತೆ ಪೋಟೋ ಇಟ್ಟು ಪೂಜೆ ಮಾಡುತ್ತಿದ್ದು ಇದು ಬೆಳಗಾವಿಯಲ್ಲಿ ಸಖತ್ ವೈರಲ್ ಆಗುತ್ತಿದೆ.
ಅದಲ್ಲದೇ “ಗಣೇಶನ ದರ್ಶನಕ್ಕೆ ಕಾಡಿನಿಂದ ನಾಡಿಗೆ ಬಂದಿರುವ ಚಿರತೆಗೆ ಆಟವಾದ್ರೆ ಅರಣ್ಯ ಇಲಾಖೆ ಸಿಬ್ಬಂದಿಯ ಪರದಾಟ” ಅಂತ ಪೋಸ್ಟರ್ ಬರೆದು ಅಂಟಿಸಲಾಗಿದೆ. ಇದರ ಜೊತೆಗೆ ಆಜಾದಿ ಕಾ ಅಮೃತಮಹೋತ್ಸವ, ಹರ್ ಘರ್ ತಿರಂಗಾ ಅಂತಾ ಮನೆಯವರು ಬರೆದುಕೊಂಡಿದ್ದಾರೆ.
ಈ ಕುರಿತಂತೆ ಮಾತನಾಡಿದ ಸವಿತಾ ಚೌಗಲೆ, ಬೆಳಗಾವಿಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದರಿಂದ ಈ ಬಾರಿಯ ಗಣೇಶೋತ್ಸವ ಆಚರಣೆಗೆ ಸ್ವಲ್ಪ ಕಷ್ಟವಾಗುತ್ತಿದೆ ಆದರೆ ಚಿರತೆ ಬೇಗ ಸಿಗಲಿ ಎಲ್ಲರಿಗೂ ನೆಮ್ಮದಿ ಸಿಗಲಿ ಅಂತಾ ಪ್ರಾರ್ಥನೆ ಮಾಡುತ್ತಿದ್ದಾರೆ. ಆದರೆ ಇವರ ಈ ಪ್ರಾರ್ಥನೆಗಳಿಗೆ ಕ್ಯಾರೆ ಅನ್ನದ ಮಾಯಾವಿ ಚಿರತೆ ಮಾತ್ರ ತನ್ನ ಕಣ್ಣಮುಚ್ಚಾಲೆ ಆಟವನ್ನು ಮುಂದುವರಿಸಿ ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ಬಸವಳಿಸಿದ್ದು ಮಾತ್ರ ವಿಪರ್ಯಾಸ.
PublicNext
05/09/2022 11:25 am