ತುಮಕೂರು: ನಿರಂತರ ಮಳೆಗೆ ಸಿದ್ಧಗಂಗೆಯ ಪುಣ್ಯ ಜಲ ಪವಿತ್ರ ತೀರ್ಥೋದ್ಭವ ಸ್ಥಳ ಸಂಪೂರ್ಣವಾಗಿ ಜಲಾವೃತವಾಗಿದೆ. ಇದೇ ಮೊದಲ ಬಾರಿಗೆ ಸಿದ್ದಗಂಗೆಯ ತೀರ್ಥೋದ್ಭವ ಜಲ, ಉಕ್ಕಿದೆ ಎನ್ನಲಾಗುತ್ತಿದೆ.
ತುಮಕೂರಿನ ಕ್ಯಾತ್ಸಂದ್ರ ಬಳಿ ಸಿದ್ದಗಂಗಾ ಮಠದ ಬೆಟ್ಟದ ಮೇಲಿರುವ ಪುಣ್ಯಕ್ಷೇತ್ರ ಇದಾಗಿದ್ದು ತೀರ್ಥೋದ್ಭವನ್ನು ಕಣ್ತುಂಬಿಸಿಕೊಳ್ಳಲು ಭಕ್ತರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಗೋಸಲ ಸಿದ್ದೇಶ್ವರರು ತಮ್ಮ ಪಾದದಿಂದ ಬಂಡೆಗೆ ಗುದ್ದಿ ನೀರು ಹರಿಸಿದ್ದರು ಎನ್ನುವ ಪ್ರತೀತಿ ಇದ್ದು ಈ ನೀರು ಹರಿದ ಸ್ಥಳವನ್ನು ಸಿದ್ದಗಂಗೆ ಎಂದು ಕರೆಯಲಾಗುತ್ತಿದೆ. 1300ರಿಂದ 1350 ಇಸವಿ ಸಂದರ್ಭದಲ್ಲಿ ಸಿದ್ದಗಂಗೆ ಮಠಕ್ಕೆ ಭೇಟಿ ನೀಡಿದ್ದ ಗೋಸಲ ಸಿದ್ದೇಶ್ವರರು ತಮ್ಮ 101 ಶಿಷ್ಯರೊಂದಿಗೆ ಇದೇ ಜಾಗದಲ್ಲಿ ತಪೋನುಷ್ಠಾನ ಮಾಡಿ ತಪಸ್ಸು ಮಾಡಿವ ವೇಳೆ ಬಾಯಾರಿಕೆಯಾದ ಪರಿಣಾಮ ನೀರಿಗಾಗಿ ಬಂಡೆಗೆ ಕಾಲಿನಲ್ಲಿ ಗುದ್ದಿದ್ದರ ಪರಿಣಾಮ ಬಂಡೆಯಿಂದ ನೀರು ಬರಲು ಪ್ರಾರಂಭವಾಗಿದೆ ಎನ್ನುವ ದಂತಕಥೆ ಇದೆ. ಅಂದಿನಿಂದ ಇಂದಿನವರೆಗೂ ದೋಣೆಯಲ್ಲಿ ವರ್ಷವಿಡೀ ನೀರು ಬತ್ತದೆ ಇರುತ್ತದೆ. ಕಳೆದ ಒಂದು ವಾರದಿಂದ ಬಿದ್ದ ಭಾರಿ ಮಳೆಗೆ ನೀರಿನ ಪ್ರಮಾಣ ಹೆಚ್ಚಾಗಿದ್ದು ವಿಶೇಷ ಪೂಜೆ ಮಾಡಲಾಗುತ್ತಿದೆ.
PublicNext
10/08/2022 08:17 am