ತಿರುವನಂತಪುರ: ಕರ್ನಾಟಕದಲ್ಲಿ ಭಾರಿ ಸದ್ದು ಮಾಡಿದ್ದ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಹೇರಿಕೆ ಈಗ ಕೇರಳಕ್ಕೂ ಕಾಲಿಟ್ಟಿದ್ದು ಕಣ್ಣೂರು ಜಿಲ್ಲೆಯ ದೇವಸ್ಥಾನವೊಂದರಲ್ಲಿ ಮುಸ್ಲಿಮರು ನಡೆಸುತ್ತಿದ್ದ ವ್ಯಾಪಾರಕ್ಕೆ ಅನುಮತಿ ನಿರಾಕರಿಸಲಾಗಿದೆ. ಕಣ್ಣೂರು ಜಿಲ್ಲೆಯ ಕುನ್‌ಹಿಮಂಗಲಂನ ಪ್ರಸಿದ್ಧ ಮಲ್ಲಿಯೋಡು ಪಲೊಟ್ಟು ಕಾವು ದೇವಸ್ಥಾನದ ಆವರಣದ ಒಳಗೆ ಮುಸ್ಲಿಮರ ಪ್ರವೇಶ ನಿರ್ಬಂಧಿಸಿ ಆಡಳಿತ ಮಂಡಳಿ ಆದೇಶ ಹೊರಡಿಸಲಾಗಿದೆ.
ವಿಷ್ಣು ಆರಾಧನೆಗೆ ಸಂಬಂಧಿಸಿದ ವಾರ್ಷಿಕ ಉತ್ಸವದ ವೇಳೆ ದೇವಸ್ಥಾನದ ಆವರಣದ ಒಳಗೆ ಪ್ರವೇಶಿಸದಂತೆ ಮುಸ್ಲಿಮರಿಗೆ ನಿರ್ಬಂಧ ವಿಧಿಸಲಾಗಿತ್ತು. ಇದೇ ಏಪ್ರಿಲ್ 14ರಿಂದ 19ರವರೆಗೆ ಮಲೊಟ್ಟು ಕಾವು ದೇವಳದ ಉತ್ಸವ ನಡೆದಿದ್ದು, ಈ ವೇಳೆ ಧಾರ್ಮಿಕ ನಿರ್ಬಂಧ ಜಾರಿಗೊಳಿಸಲಾಗಿತ್ತು.'ಮುಸ್ಲಿಂ ಧರ್ಮಿಯರು ಯಾರೂ ಕೂಡ ದೇವಸ್ಥಾನದ ಆವರಣ ಪ್ರವೇಶ ಮಾಡಬಾರದು' ಎನ್ನುವ ಒಕ್ಕಣೆಯುಳ್ಳ ಫಲಕವನ್ನು ದೇವಸ್ಥಾನದ ಮುಂಭಾಗದಲ್ಲಿ ಅಳವಡಿಸಲಾಗಿತ್ತು. ''ಇಂತಹದ್ದೊಂದು ಕ್ರಮ ಇಲ್ಲಿ ಜಾರಿಯಾಗುತ್ತಿರುವುದು ಇದೇ ಮೊದಲೇನು ಅಲ್ಲ. ಹಿಂದಿನ ವರ್ಷವೂ ಮುಸ್ಲಿಂ ನಿಷೇಧದ ಫಲಕ ಅಳವಡಿಸಲಾಗಿದೆ. ಆದರೆ ಈ ವರ್ಷ ಅದು ಹೆಚ್ಚು ಸುದ್ದಿ ಮಾಡಿದೆ,'' ಎಂದು ಸ್ಥಳೀಯರು ಹೇಳುತ್ತಾರೆ.
PublicNext
20/04/2022 08:26 am