ಬೆಂಗಳೂರು: ಹಿಜಾಬ್ ವಿವಾದ ಬೇರೆ ರೂಪ ತೆಗೆದುಕೊಂಡಿದೆ. ಹೈಕೋರ್ಟ್ ನಲ್ಲಿದ್ದಾಗ ಒಂದು ಲೆಕ್ಕ ಇತ್ತು. ತೀರ್ಪು ಬಂದ್ಮೇಲೆ ಬೇರೆಯದ್ದೇ ರೂಪ ತಾಳಿತು. ಆದರೆ ಈಗ ಅದು ಹಿಂದೂ-ಮುಸ್ಲಿಂ ಅನ್ನೋ ಧಾರ್ಮಿಕ ಯುದ್ಧವಾಗಿಯೇ ಪರಿವರ್ತನೆಗೊಂಡಿದೆ.
ಉಡುಪಿಯ ಕಾಪುವಿನ ಮೂರು ಮಾರಿಗುಡಿ ದೇವಸ್ಥಾನ ಆಡಳಿತ ಮಂಡಳಿ ಜಾತ್ರೆಯಲ್ಲಿ ಹಿಂದೂಯೇತರ ವ್ಯಾಪಾರಿಗಳಿಗೆ ಅಂಗಡಿಗಳನ್ನ ಇಡಲು ಅವಕಾಶ ಮಾಡಿಕೊಟ್ಟಿಲ್ಲ. ಈ ಒಂದು ನಿರ್ಧಾರ ಇಡೀ ರಾಜ್ಯದಲ್ಲೆಡೆ ನಿಧಾನವಾಗಿಯೇ ವ್ಯಾಪಿಸುತ್ತಿದೆ.
ದಕ್ಷಿಣ ಕನ್ನಡದ ಮಂಗಳಾದೇವಿ,ಬಪ್ಪನಾಡು ದುರ್ಗಾಪರಮೇಶ್ವರಿ ಜಾತ್ರೆಗಳಲ್ಲೂ ಹಿಂದೂಯೇತರ ವ್ಯಾಪಾರಿಗಳಿಗೆ ಅವಕಾಶ ಮಾಡಿಕೊಡಬಾರದು ಅನ್ನೋ ನಿರ್ಧಾರಕ್ಕೆ ಬರಲಾಗಿದೆ.
ಅಂದ್ಹಾಗೆ ದೇವಸ್ಥಾನದ ಆಡಳಿತ ಮಂಡಳಿಗಳು 2002 ರಲ್ಲಿ ರೂಪಿಸಲಾದ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳೂ ಹಾಗೂ ಧರ್ಮಾದಯ ದತ್ತಿಯ ನಿಯಮವನ್ನೇ ಈಗ ಅಸ್ತ್ರವಾಗಿ ಬಳಸಿಕೊಂಡಿದೆ. ಧಾರ್ಮಿಕ ದತ್ತಿ ಇಲಾಖೆಯ ನಿಯಮಾವಳಿ ಪುಸ್ತಕದ 446 ನೇ ಪುಟದ 12 ನೇ ನಿಯಮದಲ್ಲಿ ಹೀಗೆ ಹೇಳಲಾಗಿದೆ.
ದೇವಸ್ಥಾನದ ಸಮೀಪದ ಜಮೀನು-ಕಟ್ಟಡ ಹಾಗೂ ನಿವೇಶನಗಳು ಸೇರಿದಂತೆ ಸವಲತ್ತನ್ನು ಹಿಂದೂಗಳಲ್ಲದ ಯಾವುದೇ ವ್ಯಕ್ತಿಗೆ ಗುತ್ತಿಗೆ ನೀಡುವಂತಿಲ್ಲ ಅಂತಲೇ ಇದೆ.
ಇದೇ ಈಗ ಧಾರ್ಮಿಕ ಸಂಸ್ಥೆಗಳಿಗೆ ಒಂದು ರೀತಿ ಅಸ್ತ್ರವಾಗಿಯೆ ಇದೆ. ಹಿಜಾಬ್ ವಿರುದ್ಧ ನಾವು ಹೋರಾಡ್ತಿಲ್ಲ ಅಂತಲೂ ಈ ಒಂದು ಅಸ್ತ್ರ ಇಟ್ಟುಕೊಂಡು ಹೇಳಲು ಅನುಕೂಲವಾದಂತಿದೆ.
PublicNext
23/03/2022 01:13 pm