ವಿಜಯನಗರ: ಹೂವಿನಹಡಗಲಿ ತಾಲ್ಲೂಕಿನ ಸುಕ್ಷೇತ್ರ ಮೈಲಾರಲಿಂಗೇಶ್ವರ ಕಾರ್ಣಿಕ ಫೆಬ್ರವರಿ 18ರಂದು ಹೊರಬಿದ್ದಿದ್ದು, 'ಮಳೆ ಬೆಳೆ ಸಂಪಾಯಿತಲೆ ಪರಾಕ್' ಎಂದು ಗೊರವಪ್ಪ ನುಡಿದಿದ್ದಾನೆ.
ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವವು ಇಂದು ಅದ್ಧೂರಿಯಾಗಿ ನಡೆಯಿತು. ಮೈಲಾರದ ಡೆಂಕನಮರಡಿಯಲ್ಲಿ ಗೊರವಪ್ಪ ರಾಮಪ್ಪಜ್ಜ 15 ಅಡಿ ಬಿಲ್ಲನ್ನೇರಿ ಮಳೆ ಬೆಳೆ ಸಂಪಾಯಿತಲೆ ಪರಾಕ್ ಎನ್ನುತ್ತಿದ್ದಂತೆ ಭಕ್ತರ ಸಂಭ್ರಮ ಮುಗಿಲು ಮುಟ್ಟಿತ್ತು. ಈ ವಿಶಿಷ್ಟ ಭವಿಷ್ಯವಾಣಿಗೆ ಲಕ್ಷಾಂತರ ಭಕ್ತರು ಸಾಕ್ಷಿಯಾದರು.
'ಪ್ರಸಕ್ತ ವರ್ಷದಲ್ಲಿ ಮಳೆ ಮತ್ತು ಬೆಳೆ ಸೊಂಪಾಗಿ ಆಗುತ್ತದೆ. ರೈತರು ಖುಷಿಯಾಗಿರುತ್ತಾರೆ. ರಾಜಕೀಯವಾಗಿ ನೈರುತ್ಯ ಭಾಗದ ಕುಬೇರ ಮೂಲೆಯ ಪ್ರಭಾವಿ ವ್ಯಕ್ತಿ ರಾಜ್ಯಭಾರ ಮಾಡಲಿದ್ದಾರೆ' ಎಂದು ಕಾರ್ಣಿಕ ವಾಣಿಯನ್ನು ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ವಿಶ್ಲೇಷಿಸಿದರು. ಬಿಲ್ಲಿನಿಂದ ಧುಮುಕಿದ ಗೊರವಪ್ಪನನ್ನ ಭಕ್ತರು ಕೆಳಗೆ ಬೀಳದಂತೆ ಹಿಡಿದರು.
PublicNext
18/02/2022 10:03 pm