ಹಾಸನ: ನಾಡಿನ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಹಾಸನಾಂಬೆ ದೇವಿ ದೇವಾಲಯದ ಬಾಗಿಲು ತೆರೆಯಲು ಕ್ಷಣಗಣನೆ ಪ್ರಾರಂಭವಾಗಿದೆ. ಆಶ್ವೀಜ ಮಾಸದ ಮೊದಲ ಗುರುವಾರದಂದು ಬ್ರಾಹ್ಮೀ ಮುಹೂರ್ತದಲ್ಲಿ ಬಾಗಿಲು ತೆರೆಯಲಿರುವ ಹಾಸನಾಂಬೆ ದೇವಾಲಯ ವರ್ಷಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ಭಾಗ್ಯ ಸಿಗಲಿದೆ.
ನಾಳೆ ಬೆಳಗ್ಗೆ 12 ಗಂಟೆ ಸುಮಾರಿಗೆ ದೇವಾಲಯದ ಬಾಗಿಲನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಜಿಲ್ಲಾಧಿಕಾರಿ ಆರ್.ಗಿರೀಶ್ ಮತ್ತಿತರ ಗಣ್ಯರ ಸಮ್ಮುಖದಲ್ಲಿ ತೆರೆಯಲಾಗುತ್ತದೆ. ಈ ಬಾರಿ 10 ದಿನಗಳ ಕಾಲ ದೇವಾಲಯದ ಬಾಗಿಲು ತೆರೆಯಲಿದ್ದು, ಎಂಟು ದಿನ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಹಾಸನ ಜಿಲ್ಲಾಡಳಿತ ಜಾತ್ರಾ ಮಹೋತ್ಸವ ನಡೆಸಲು ಸಕಲ ರೀತಿಯಲ್ಲೂ ಸಜ್ಜುಗೊಂಡಿದ್ದು ವ್ಯಾಕ್ಸಿನ್ ಹಾಕಿಸಿಕೊಂಡವರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಿದೆ.
ದೇವಾಲಯದ ಆವರಣವನ್ನು ಫಲ, ಪುಷ್ಪಗಳಿಂದ ಭರ್ಜರಿಯಾಗಿ ಸಿಂಗರಿಸಲಾಗುತ್ತಿದೆ. ದೇವಾಲಯದ ಮುಂಭಾಗ, ಸುತ್ತಮುತ್ತ
ಮತ್ತು ನಗರದ ತುಂಬೆಲ್ಲಾ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಸಾರ್ವಜನಿಕ ದರ್ಶನಕ್ಕೆ ತೊಂದರೆ ಆಗದಂತೆ ಸರತಿ ಸಾಲಿನಲ್ಲಿ ಬರಲು ಬ್ಯಾರಿಕೇಡ್‌ಗಳನ್ನು ನಿರ್ಮಿಸಲಾಗಿದ್ದು, ಶೀಘ್ರ ದರ್ಶನಕ್ಕಾಗಿ 300ರೂ. ಮತ್ತು 1000 ರೂ.ಗಳ ಟಿಕೆಟ್ ವ್ಯವಸ್ಥೆಯನ್ನು ಮಾಡಲಾಗಿದೆ.
ಒಟ್ಟಾರೆ ನಾಳೆ ಮಧ್ಯಾಹ್ನ ವಿದ್ಯುಕ್ತವಾಗಿ ದೇವಾಲಯ ಬಾಗಿಲು ತೆರೆದು ಭಕ್ತರಿಗೆ ದರ್ಶನ ಅವಕಾಶಕ್ಕೆ ಷರತ್ತು ಬದ್ಧ ಅವಕಾಶಕ್ಕೆ ಹಾಸನ ಜಿಲ್ಲಾಡಳಿತ ಸಜ್ಜಾಗಿದೆ. ಭಕ್ತಗಣ ಕೂಡ ಎರಡು ವರ್ಷಗಳಿಂದ ಕೊರೋನಾ ನಡುವೆ ದೇವಿ ದರ್ಶನ ಪಡೆಯಲಾಗದೇ ಈ ಬಾರಿಯ ದರ್ಶನಕ್ಕೆ ಕಾತುರರಾಗಿ ಕಾಯುತ್ತಿದ್ದಾರೆ.
PublicNext
27/10/2021 08:24 pm