ಕಾರವಾರ: ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆಯುವ ನವರಾತ್ರಿ ಉತ್ಸವ ವಿಭಿನ್ನವಾಗಿ ನಡೆಯುತ್ತದೆ. ಇಲ್ಲಿನ ರಾಯೇಶ್ವರ ಕಾವೂರು ಕಾಮಾಕ್ಷಿ, ಹಾಗೂ ಶಾಂತೇರಿ ಕಾಮಾಕ್ಷಿ ದೇವಾಲಯದಲ್ಲಿ ಕುದಿಯುವ ಎಣ್ಣೆಯಲ್ಲಿ ವಡೆ ತೆಗೆಯುವುದೇ ವಿಶೇಷವಾಗಿದೆ. ಗೌಡ ಸಾರಸ್ವತ ಬ್ರಾಹ್ಮಣ ಕುಟುಂಬದವರು ಆರಾಧಿಸುವ ದೇವಾಲಯಗಳಲ್ಲಿ ಆಶ್ವಿಜ ಶುಕ್ಲ ಪಾಡ್ಯದಿಂದ ಹುಣ್ಣಿಮೆಯ ದಿನದವರೆಗೆ ವಿವಿಧ ಕಾರ್ಯಕ್ರಮ ನಡೆಯುತ್ತದೆ. ಪಂಚಮಿ ದಿನ ಬಲಿ ನೀಡಲಾಗುತ್ತದೆ. ಹುಣ್ಣಿಮೆಯ ದಿನ ಬೆಳಿಗ್ಗೆಯಿಂದ ರಾತ್ರಿವರೆಗೆ ವಿವಿಧ ಕಾರ್ಯಕ್ರಮ ನಡೆಯುತ್ತದೆ ಶೀಗೆ ಹುಣ್ಣಿಮೆ ಸಂದರ್ಭದಲ್ಲಿ ದೇವಾಲಯದ ಆವರಣದಲ್ಲಿ ವಡೆ ಸೇವೆ ನಡೆಸಲಾಗುತ್ತದೆ. ಕೆಂಡದಿಂದ ಬೆಂಕಿ ಮಾಡಿ ಎಣ್ಣೆಯನ್ನ ಚೆನ್ನಾಗಿ ಕುದಿಸುತ್ತಾರೆ. ತಯಾರಿಸಿದ ಹಿಟ್ಟನ್ನ ವಡೆ ರೂಪದಲ್ಲಿ ಮಾಡಿ ಎಣ್ಣೆಗೆ ಹಾಕಲಾಗುತ್ತದೆ. ಮೊದಲು ಮುಖ್ಯ ಅರ್ಚಕರು ವಡೆ ತೆಗೆದ ಬಳಿಕ ಇತರ ಕುಳಾವಿಗಳು ಭಕ್ತರು ಬರಿಗೈಯಲ್ಲಿ ವಡೆ ತೆಗೆಯುವುದು ಸಂಪ್ರದಾಯ.ಇವೆಲ್ಲಾ ಕಾರ್ಯಗಳು ಶ್ರದ್ಧಾ-ಭಕ್ತಿಯಿಂದ ನಡೆಯುತ್ತೆ. ಕುದಿಯುವ ಎಣ್ಣೆಯಲ್ಲಿ ಬರಿಗೈಯಿಂದ ವಡೆ ತೆಗೆದರೂ ಯಾರ ಕೈಯಲ್ಲಿ ಗುಳ್ಳೆಗಳು ಬರೋದಿಲ್ಲ. ನೆರೆದ ಭಕ್ತರನ್ನ ಈ ಅಪೂರ್ವ ಕ್ಷಣ ರೋಮಾಂಚನಗೊಳಿಸುತ್ತೆ.
ಕೇವಲ ಇದೊಂದು ದೇವಾಲಯದಲ್ಲಿ ಅಲ್ಲ, ಪಟ್ಟಣದ ಕಾವೂರು ಕಾಮಾಕ್ಷಿ ದೇವಾಲಯದಲ್ಲಿ ಹಾಗೂ ಶಾಂತೇರಿ ಕಾಮಾಕ್ಷಿ ದೇವಾಲಯ, ನವಿಲುಗೋಣದ ಮಹಿಷಾಸುರಮರ್ಧಿನಿ ದೇವರ ಸಾನಿಧ್ಯದಲ್ಲಿ ಇದೇ ರೀತಿಯ ಆಚರಣೆ ನಡೆದುಕೊಂಡು ಬಂದಿದೆ. ವಡೆ ತೆಗೆಯುವ ಭಕ್ತರು, ಮೂರು ದಿನಗಳ ಮೊದಲು ವೃತವನ್ನ ಮಾಡಬೇಕೆಂಬ ನಿಯಮವಿದೆ. ವಡೆ ತೆಗೆಯುವ ಕ್ಷಣವನ್ನ ನೋಡಲು ಸಾವಿರಾರು ಜನ ದೇವಾಲಯದಲ್ಲಿ ಸೇರ್ತಾರೆ. ಇಲ್ಲಿ ನೆಲೆಸಿರುವ ದೇವಿಯರುಗಳು ಭಕ್ತರ ಅಭಿಷ್ಠೆಯನ್ನ ನೆರವೇರಿಸಿ ಸಲಹುತ್ತಾಳೆ. ಭಕ್ತರು ಬೇಡಿದ್ದನ್ನ ನೀಡ್ತಾಳೆ. ದೇವಿಯ ಮುಂದೆ ನಿಂತು ತಮ್ಮ ಕಷ್ಟ ಸಂಕಷ್ಟಗಳನ್ನ ಹೇಳಿಕೊಳ್ಳುವುದರಿಂದ ದೇವಿ ಪರಿಹರಿಸ್ತಾಳೆಂಬ ನಂಬಿಕೆ ಭಕ್ತರಲ್ಲಿದೆ. ಹೀಗಾಗಿ ಕಾಮಾಕ್ಷಿ ದೇವಿಗೆ ಭಕ್ತಿಯಿಂದ, ಶ್ರದ್ಧೆಯಿಂದ ಭಕ್ತರು ನಡೆದುಕೊಳ್ತಾರೆ.
ಜಾತಿ-ಬೇಧವಿಲ್ಲದೇ ಎಲ್ಲಾ ಸಮುದಾಯದ ಭಕ್ತರು ಇಲ್ಲಿಗೆ ಬರ್ತಾರೆ. ಕಾರ್ಯಕ್ರಮದಲ್ಲಿ ಹಾಜರಿದ್ದು, ವಡೆ ತೆಗೆದು ಕೃತಾರ್ಥರಾಗುತ್ತಾರೆ. ನಂತರ ಬಂದಂತ ಭಕ್ತರಿಗಾಗಿ ಪ್ರಸಾದ ಭೋಜನ ನೀಡಲಾಗುತ್ತದೆ.
PublicNext
21/10/2021 10:45 pm