ಚಿತ್ರದುರ್ಗ : ಅದು 1475 ರ ಪಾಳೇಗಾರರ ಆಳ್ವಿಕೆಯ ಕಾಲದಲ್ಲಿ ನಿರ್ಮಾಣ ಮಾಡಿರುವ ಗಣಪತಿಯ ವಿಗ್ರಹ. ಅಂದಹಾಗೆ ಚಿತ್ರದುರ್ಗ ಜಿಲ್ಲೆಯ ಅರೆ ಮಲೆನಾಡಿನ ಹೊಳಲ್ಕೆರೆ ಪಟ್ಟಣದಲ್ಲಿರುವ ಪ್ರಸನ್ನ ಮಹಾಗಣಪತಿ ವಿಗ್ರಹವಾಗಿದೆ. ಮೊದಲು ಬಯಲಿನಲ್ಲಿ ಸ್ಥಾಪಿಸಲಾಗಿದ್ದರಿಂದ ಇದನ್ನು ಬಯಲು ಗಣಪ ಎಂದು ಸಹ ಕರೆಯಲಾಗುತ್ತಿತ್ತು. ಇದೀಗ ಪ್ರಸನ್ನ ಮಹಾಗಣಪತಿ ಎಂದು ಪ್ರಸಿದ್ದಿಯಾಗಿದೆ.
ಪ್ರಾಚೀನ ಕಾಲದ ಗಣಪತಿಯ ವಿಗ್ರಹ ಸುಮಾರು 20 ಅಡಿ ಎತ್ತರವಿದೆ. ದೊಣ ತಿಮ್ಮನಾಯಕ ಎಂಬುವನು ಪ್ರತಿಷ್ಠಾಪಿಸಿದ್ದಾನೆ ಎಂದು ಹೇಳಲಾಗುತ್ತದೆ. ಈ ವಿಘ್ನೇಶ್ವರನು ಭಕ್ತರ ಕಷ್ಟಗಳನ್ನು ಪರಿಹರಿಸುತ್ತಾ ಪ್ರಸಿದ್ದಿಯನ್ನು ಪಡೆದಿದ್ದಾನೆ.
ಅತ್ಯಂತ ಶಕ್ತಿ ಶಾಲಿ ಗಣಪತಿ ಎಂದು ಹೆಗ್ಗಳಿಕೆಗೆ ಪಾತ್ರವಾಗಿರುವ ಗಣಪನನ್ನು ನೋಡಲು ದರ್ಶನ ಪಡೆದು ಧನ್ಯರಾಗಲು ಹೊರ ರಾಜ್ಯಗಳಿಂದಲೂ ಇಲ್ಲಿಗೆ ಭಕ್ತರು ಹಾಗೂ ಪ್ರವಾಸಿಗರು ಬರುತ್ತಾರೆ. ಭಕ್ತರು ತನ್ನ ಬಳಿ ಕಷ್ಟಗಳನ್ನು ಹೇಳಿಕೊಂಡರೆ ಸುಲಭವಾಗಿ ಪರಿಹರಿಸುತ್ತಾನೆ. ಇಂತಹ ಗಣಪತಿಗೆ ಕೂದಲುಗಳಿರುವುದರಿಂದ ಜಡೆ ಗಣಪತಿ ಎಂದು ಕರೆಯುತ್ತಾರೆ. ಈ ಜಡೆಯನ್ನು ಪಾರ್ವತಿಯ ಜಡೆ ಎಂದು ಹೇಳಲಾಗುತ್ತದೆ. ಈ ಜಡೆಗೆ ಹಬ್ಬ ಹರಿದಿನಗಳಲ್ಲಿ ಮಹಿಳೆಯರು, ಯುವತಿಯರು ಹರಕೆ ಹೊತ್ತು ಬೆಣ್ಣೆಯನ್ನು ಹಚ್ಚಿ ಪೂಜಿಸುತ್ತಾರೆ. ಇದರಿಂದ ಕೂದಲು ದಟ್ಟವಾಗಿ ಆರೋಗ್ಯವಾಗಿ ಬೆಳೆಯುತ್ತೆವೆ ಎಂಬ ನಂಬಿಕೆಯೂ ಇದೆ. ಇದರ ಜೊತೆಗೆ ಊರಿಗೆ ಬರಗಾಲ ಬಂತೆಂದರೆ ಇಲ್ಲಿನ ಗಣಪನಿಗೆ ನೀರಿನ ಅಭಿಷೇಕ ಮಾಡಿದರೆ ಮಳೆ ಬರುತ್ತದೆ ಎಂಬ ವಾಡಿಕೆ ಈ ಭಾಗದ ಜನರಲ್ಲಿದೆ.
PublicNext
10/09/2021 07:33 am