ಶಿವಮೊಗ್ಗ: ''ಜಗತ್ತಿನಲ್ಲಿ ಒಂದು ದೇಶ ಭೂಪಟದಿಂದ ಅಳಿಸಿಹೋಗಲಿದೆ ಎಂದು 2 ವರ್ಷಗಳ ಹಿಂದೆ ಭವಿಷ್ಯ ನುಡಿದಿದ್ದೆ. ಅದರಂತೆ ಇಂದು ಅಫ್ಘಾನಿಸ್ತಾನವು ತಾಲಿಬಾನ್ ವಶವಾಗುತ್ತಿದೆ'' ಎಂದು ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದ್ದಾರೆ.
ಶಿವಮೊಗ್ಗ ಜಿಲ್ಲಾ ಪ್ರವಾಸದಲ್ಲಿರುವ ಶ್ರೀಗಳು ಜಡೆ ಸಂಸ್ಥಾನದ ಮಠದ ಜಗದ್ಗುರು ಕೆಂಪಿನ ಸಿದ್ದವೃಷಭೇಂದ್ರ ಸ್ವಾಮೀಜಿ ಕರ್ತೃ ಗದ್ದುಗೆಗೆ ಭೇಟಿ ನೀಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಅವರು, "ಮುಂದಿನ ಎರಡು ವರ್ಷಗಳಲ್ಲಿ ಜಲಪ್ರಳಯದಿಂದ ಜನರು ತತ್ತರಿಸಲಿದ್ದಾರೆ ಎಂದು ಎಚ್ಚರಿಸಿದ್ದಾರೆ. ಮಳೆ ಹೆಚ್ಚಾಗಲು ಏನು ಕಾರಣ ಎಂಬುದನ್ನು ವಿವರಿಸಿ, ಕುಂಭ ರಾಶಿಯಲ್ಲಿ ಗುರು ಪ್ರವೇಶಿಸುವುದರಿಂದ ಮಳೆ ಹೆಚ್ಚು ಬೀಳಲಿದೆ. ಕಾರ್ತಿಕ ಮಾಸದವರೆಗೂ ನೆರೆ, ಮತ್ತಿತರ ವಿಕೋಪಗಳಿಂದ ಜನ ತತ್ತರಿಸಲಿದ್ದಾರೆ. ಅಕಾಲಿಕ ಮಳೆ, ನೆರೆ, ಬರದಿಂದ ಜನ ತತ್ತರಿಸಲಿದ್ದು, ಪ್ರಕೃತಿ ವಿಕೋಪಕ್ಕೆ ಸಿದ್ಧರಾಗಬೇಕಿದೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಡೆತಡೆಗಳು ಎದುರಾದರೂ, ಯಾವುದೇ ಅಡ್ಡಿಯಿಲ್ಲದೆ, ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು, ಆಡಳಿತ ಮುಂದುವರೆಸಲಿದ್ದಾರೆ. ಮುಂದಿನ 5 ವರ್ಷಗಳವರೆಗೂ ಕೊರೊನಾ ಸಂಪೂರ್ಣ ನಾಶವಾಗುವುದಿಲ್ಲ, ಆದರೆ, ಜಗತ್ತನ್ನು ತೀವ್ರವಾಗಿ ಕಾಡುತ್ತಿರುವ ಕೊರೋನಾ ವ್ಯಾಧಿಯಿಂದ ಭಾರತಕ್ಕೆ ಯಾವುದೇ ಧಕ್ಕೆ ಇಲ್ಲ ಎಂದು ಅರಸೀಕೆರೆ ತಾಲೂಕಿನ ಕೋಡಿಮಠ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ಪ್ರಕೃತಿ ಕೊಟ್ಟಿರುವ ರೋಗಕ್ಕೆ ಪ್ರಕೃತಿಯಿಂದಲೇ ಔಷಧಿ ದೊರೆಯಲಿದೆ ಎಂದು ಹೇಳಿದ್ದಾರೆ. ಪ್ರತಿಯೊಬ್ಬರು ಅವರವರ ಇಷ್ಟದೇವರ ಪ್ರಾರ್ಥನೆ ಸಲ್ಲಿಸಬೇಕು. ಮನೆಯಲ್ಲಿ ಮಾವು, ಬೇವು, ಬೇಟೆ ಸೊಪ್ಪು ಇಡಬೇಕು. ರಾತ್ರಿ ಮಲಗುವಾಗ ಬಿಲ್ವಪತ್ರೆ ತಲೆಗೆ ಸುತ್ತಿ ಮಲಗಬೇಕು. ಗೃಹದಲ್ಲಿ ನಿತ್ಯ ದೀಪ ಉರಿಸಬೇಕು. ಕೊರೊನಾ ಮೇ ತಿಂಗಳಲ್ಲಿ ನಿರ್ನಾಮವಾಗಲಿದೆ. ಸ್ವಲ್ಪ ಎಚ್ಚರ ತಪ್ಪಿದರೂ ವರ್ಷಪೂರ್ತಿ ಇರಲಿದೆ ಎಂದು ಶ್ರೀಗಳು ಹೇಳಿದರು.
ಕೊರೊನಾ ರೋಗದಿಂದ ಬಲಿಯಾದವರಿಗಿಂತ ಭಯಕ್ಕೆ ಮೃತಪಟ್ಟವರೇ ಅಧಿಕ. ವೈರಸ್ ಸೋಂಕಿಗೆ ಹೆದರದೆ ಧೈರ್ಯದಿಂದ ಎಲ್ಲವನ್ನು ಎದುರಿಸುವ ಶಕ್ತಿ ಬೆಳೆಸಿಕೊಳ್ಳಬೇಕು, ಸ್ವಚ್ಛತೆ, ಒಳ್ಳೆ ಚಿಂತನೆಯನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
PublicNext
31/08/2021 04:24 pm