ದಾವಣಗೆರೆ: ಇದು ನಿಜಕ್ಕೂ ಅಚ್ಚರಿ. ನಾವೆಲ್ಲಾ ಒಬ್ಬರೋ ಇಬ್ಬರೋ ಸನ್ಯಾಸ ದೀಕ್ಷೆ ತೆಗೆದುಕೊಂಡರೆ ಅಬ್ಬಬ್ಬಾ ಎಂದು ಹುಬ್ಬೇರಿಸ್ತೇವೆ, ಬೆರಗಾಗ್ತೇವೆ. ಆದ್ರೆ, ಮೂರು ತಲೆಮಾರಿನವರು ಒಮ್ಮೆಲೆ ಅಲೌಕಿಕ ಜೀವನಕ್ಕೆ ಕಾಲಿಡುವುದು ಅಂದ್ರೆ ಸುಮ್ನೇನಾ. ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಮನೆತನವೊಂದರ ಸದಸ್ಯರು ಈ ದೀಕ್ಷೆ ತೆಗೆದುಕೊಂಡಿದ್ದಾರೆ ಅನ್ನೋದು ಜೈನ ಸಮುದಾಯದ ಮಾತು. ಕೋಟ್ಯಧಿಪತಿಯ ಕುಟುಂಬದ ಐವರು ಈ ನಿರ್ಧಾರಕ್ಕೆ ಬಂದಿದ್ದಾದರೂ ಯಾಕೆ ಅನ್ನೋ ಕುರಿತ ಸ್ಪೆಷಲ್ ರಿಪೋರ್ಟ್.
ಜೈನ ಧರ್ಮದಲ್ಲಿ ದೀಕ್ಷೆ ತೆಗೆದುಕೊಂಡು ಸನ್ಯಾಸಿಗಳಾಗುವುದನ್ನು ನೋಡಿದ್ದೇವೆ, ಕೇಳಿದ್ದೇವೆ. ಲೌಕಿಕ ಜೀವನಕ್ಕೆ ಗುಡ್ ಬೈ ಹೇಳಿ ಆಧ್ಯಾತ್ಮಿಕ ಚಿಂತನೆ ಜೊತೆಗೆ ಅಲೌಕಿಕ ಲೋಕದತ್ತ ವಾಲ್ತಾರೆ. ಆದ್ರೆ ದಾವಣಗೆರೆಯ ಮನೆತನವೊಂದರ ಮೂರು ತಲೆಮಾರಿನವರು ಒಮ್ಮೆಲೆ, ಒಂದೆಡೆ ಸನ್ಯಾಸ ದೀಕ್ಷೆ ತೆಗೆದುಕೊಂಡಿದ್ದಾರೆ. ಈ ಮೂಲಕ ಕೌತುಕಕ್ಕೂ ಕಾರಣರಾಗಿದ್ದಾರೆ. ಭಾರತೀಯ ಜೈನ ಪರಂಪರೆಯಲ್ಲಿ ಇದೇ ಮೊದಲು ಅನ್ನೋದು ಜೈನ ಸಮುದಾಯದವರು ಹೇಳುವ ಮಾತು.
ದಾವಣಗೆರೆ ಪಿಜೆ ಬಡಾವಣೆಯ ಬಟ್ಟೆ ಅಂಗಡಿ ಮಾಲೀಕ ವರದೀಚಂದ್ ಜಿ, ಅವರ ಮಗ ಅಶೋಕ್, ಸೊಸೆ ಭಾವನಾ ಅಶೋಕ್, ಮೊಮ್ಮಕ್ಕಳಾದ ಪಕ್ಷಾಲ್ ಜೈನ್, ಜಿನಾಂಕ್ ಜೈನ್ ಸುಖಭೋಗಗಳನ್ನ ತ್ಯಜಿಸಿ ಆತ್ಮ ಕಲ್ಯಾಣ ಸನ್ಯಾಸ ದೀಕ್ಷೆ ಸ್ವೀಕರಿಸಿತು.
ಕೋಟ್ಯಾಧಿಪತಿಯಾಗಿರೋ ವರದಿಚಂದ್, ಮತ್ತು ಅವರು ಕುಟುಂಬ ವಿಶ್ವಶಾಂತಿಗಾಗಿ ಈ ನಿರ್ಧಾರ ಮಾಡಿದೆ. ಇಂದು ದಾವಣಗೆರೆ ನಗರದ ಆವರಗೆರೆಯ ನಾಗೇಶ್ವರ ಪಾರ್ಶ್ವ ಭೈರವ ಜೈನ ದೇವಸ್ಥಾನದಲ್ಲಿ ಆಚಾರ್ಯ ಶ್ರೀಮದ್ ವಿಜಯ್, ಉದಯಪ್ರಭಸುರಿಶ್ವರಜೀ ಮಹಾರಾಜ್ ರ ಸಾನಿಧ್ಯದಲ್ಲಿ ಜೈನ ಸಮುದಾಯದ ವಿಧಿ ವಿಧಾನಗಳಂತೆ ಸನ್ಯಾಸತ್ವ ಸ್ವೀಕಾರ ಮಾಡಿದ್ರು.
ಅದ್ದೂರಿಯಾಗಿ ನಡೆದ ಕಾರ್ಯಕ್ರಮದಲ್ಲಿ ಕುಟುಂಬ ಎಲ್ಲಾ ಸದಸ್ಯರು ಹೊಸ ಬಟ್ಟೆ ತೊಟ್ಟು ಕುಣಿದು ಕುಪ್ಪಳಿಸುತ್ತಾ ತೆರಳಿದರು. ಇವರ ಸಮ್ಮುಖದಲ್ಲಿಯೇ ದೀಕ್ಷೆ ಪಡೆದ ಐವರು ಕೇಶ ಮುಂಡನಾ ಮಾಡಿಸಿಕೊಂಡು ಸನ್ಯಾಸತ್ವ ಜೀವನಕ್ಕೆ ಕಾಲಿಟ್ಟರು.
ಇನ್ನೂ ಹಿಂದೆ ಮಹಾರಾಜನಾಗಿದ್ದ ಮಹಾವೀರ ತನ್ನ ರಾಜ್ಯವನ್ನ ಬಿಟ್ಟು ಸನ್ಯಾಸತ್ವ ಪಡೆದಿದ್ದರು. ಮೊದಲು ವರದಿಚಂದ್ ಸನ್ಯಾಸ ಪಡೆಯಲು ನಿರ್ಧರಿಸಿದರು. ಬಳಿಕ ಪುತ್ರನ ನಿರ್ಧಾರವೂ ಇದೇ ಅಯ್ತು. ಬಳಿಕ ಮಕ್ಕಳು ಇದೇ ದಾರಿ ತುಳಿಯುವ ಸೂಚನೆ ಕೊಟ್ಟರು. ಇಡೀ ಕುಟುಂಬವೇ ಈ ನಿರ್ಧಾರಕ್ಕೆ ಬಂದ ಮೇಲೆ ತಾನೇನು ಮಾಡುವುದು ಎಂಬ ತೀರ್ಮಾನಕ್ಕೆ ಬಂದ ಭಾವನಾ ಅಶೋಕ್ ಸಹ ಪತಿ ಹಿಡಿದ ದಾರಿಯಲ್ಲಿ ನಡೆಯುವುದಾಗಿ ಸ್ವಯಂಪ್ರೇರಿತರಾಗಿ ನಿರ್ಧರಿಸಿ ಸನ್ಯಾಸಿಯಾದರು. ಆತ್ಮ ಕಲ್ಯಾಣ, ಅದಕ್ಕಾಗಿ ಜ್ಞಾನ ಸಂಪಾದನೆ, ದೇಹ ದಂಡನೆ ಸೇರಿ ಎಲ್ಲವನ್ನೂ ತ್ಯಜಿಸಿ ಮುಕ್ತಿ ಪಡೆಯಬೇಕೆಂಬ ಹೆಬ್ಬಯಕೆ ಇಟ್ಟುಕೊಳ್ಳುವುದೇ ಈ ದೀಕ್ಷೆಯ ಉದ್ದೇಶ.
ಈ ಹಿಂದೆಯೇ ಚಿಕ್ಕ ವಯಸ್ಸಿನವರಾದ ಪಕ್ಷಾಲ್, ಮತ್ತು ಜಿನಾಂಕ್ ಅರ್ಧಕ್ಕೆ ವಿದ್ಯಾಭ್ಯಾಸ ಮೊಟುಕುಗೊಳಿಸಿ ಅವರ ಧರ್ಮಗುರುಗಳು ಜೊತೆ ಧರ್ಮ ಪ್ರಸಾರ ಮಾಡುತ್ತಿದ್ದರಂತೆ. ಅದರ ಮುಂದುವರೆದ ಭಾಗ ಎನ್ನುವಂತೆ ಸನ್ಯಾಸ ಸ್ವೀಕಾರವಾಗಿದೆ. ಇನ್ನೂ ಜೈನ ಸಮುದಾಯದ ಜನರು ಸನ್ಯಾಸ ಸ್ವೀಕರಿಸಿ ಶ್ವೇತ ವರ್ಣದ ಬಟ್ಟೆ ತೊಟ್ಟರೆ ಮುಗೀತು. ಅವರು ಪ್ರಪಂಚದ ಯಾವ ಸುಖವನ್ನ ಅನುಭವಿಸಲು ಮನಸ್ಸು ಮಾಡಲ್ಲ. ಅವರ ಮನಸ್ಸು ಯಾವಾಗಲೂ ಧರ್ಮ ಪ್ರಚಾರಕ್ಕಷ್ಟೇ ಸೀಮಿತ. ಒಟ್ಟಿನಲ್ಲಿ ಎಲ್ಲಾ ಭೋಗಿಸುವ ಅವಕಾಶ ಇದ್ದರೂ ಸನ್ಯಾಸ ದೀಕ್ಷೆಯನ್ನು ಮೂರು ತಲೆಮಾರಿನ ಮಂದಿ ಸ್ವೀಕರಿಸಿದ್ದು ಇತಿಹಾಸವೇ ಸರಿ.
PublicNext
23/02/2021 12:36 pm