ಪಬ್ಲಿಕ್ ನೆಕ್ಸ್ಟ್ ವಿಶೇಷ
ಪ್ರಧಾನಿ ನರೇಂದ್ರ ಮೋದಿ ಅವರ ಉಪವಾಸ ವೃತ ಇಂದು ಎಲ್ಲೆಡೆ ಖ್ಯಾತಿ. ಅದು ನವರಾತ್ರಿ ಇರಬಹುದು ಅಥವಾ ಇನ್ನಾವುದೇ ಸಂಯಮ ಪರೀಕ್ಷೆ ಇರಬಹುದು ಮೋದಿ ನಿರ್ಧಾರ ಹಾಗೂ ಉಪವಾಸ ಅಚಲ.
2014 ರಲ್ಲಿ ಮೊದಲ ಬಾರಿಗೆ ದೇಶದ ಪ್ರಧಾನ ಮಂತ್ರಿ ಹುದ್ದೆ ಅಲಂಕರಿಸಿದ ನಂತರ ಸೆಪ್ಟೆಂಬರ್ 26 ರಂದು ಅಮೇರಿಕ ತಲುಪಿದ್ದರು. ಆಗ ಅದೇ ತಾನೆ ನವರಾತ್ರಿ ಆರಂಭವಾಗಿತ್ತು. ಸೆ. 30 ರಂದು ಅಂದಿನ ಅಮೇರಿಕ ಅಧ್ಯಕ್ಷ ಬರಾಕ್ ಓಬಾಮಾ ಮೋದಿ ಗೌರವಾರ್ಥ ಶ್ವೇತಭವನದಲ್ಲಿ ಭರ್ಜರಿ ಔತಣಕೂಟ ಎರ್ಪಡಿಸಿದ್ದರು.
ಔತಣಕೂಟದಲ್ಲಿ ಭಾಗಿಯಾದರೂ ಕೇವಲ ಬೆಚ್ಚನೆ ನೀರು ಸ್ವೀಕರಿಸಿ ತಮ್ಮ ಒಂಭತ್ತು ದಿನಗಳ ನವರಾತ್ರಿ ಉಪವಾಸ ಮುಂದುವರಿಸಿದ್ದರು. ಅಂದರೆ ಪ್ರಧಾನಿ ಮೋದಿ ಅಮೇರಿಕಕ್ಕೆ ಹೋಗಿದ್ದರೂ ಕಳೆದ 35 ವರ್ಷಗಳಿಂದ ಆಚರಿಸುತ್ತ ಬಂದಿರುವ ಮೋದಿ ಅವರ ಉಪವಾಸ ವೃತಕ್ಕೆ ಧಕ್ಕೆ ಬರಲಿಲ್ಲ.
ಉಪವಾಸದ ಬಗ್ಗೆ ಮೋದಿ ತಮ್ಮ '' ಸಾಕ್ಷಿ ಭಾವ '' ಕವಲ ಸಂಕಲನದಲ್ಲಿ ನವರಾತ್ರಿ ಉಪವಾಸವೆಂದರೆ ವಾರ್ಷಿಕ ಆತ್ಮಶುದ್ಧಿಯ ಒಂದು ವ್ಯಾಯಾಮ ಎಂದು ಬರೆದುಕೊಂಡಿದ್ದಾರೆ.
ನವರಾತ್ರಿ ಮಾತ್ರವಲ್ಲ. ಎಂತಹದೇ ಸತ್ವ ಪರೀಕ್ಷೆ ಕಾಲ ಬಂದಾಗಲೂ ಮೋದಿ ಉಪವಾಸದಿಂದ ಅದನ್ನು ಎದುರಿಸುತ್ತಾರೆಂಬ ಮಾತು ಪ್ರಚಲಿತದಲ್ಲಿದೆ.
ಇದಕ್ಕೆ ಉದಾಹರಣೆ ಎಂದರೆ 2002 ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಗೋಧ್ರಾ ಗಲಭೆ ವಿಚಾರಣೆ ಹಾಜರಾದ ಒಂದು ಪ್ರಸಂಗ. ಸುಮಾರು 9 ಗಂಟೆ ಕಾಲ ನಿರಂತರವಾಗಿ ನಡೆದ ವಿಚಾರಣೆ ಸಂದರ್ಭದಲ್ಲಿ ಯಾವುದೇ ಆಯಾಸವಿಲ್ಲದೆ 100 ಕ್ಕೂ ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸಿದ್ದರು ಎಂಬ ಆಂಶ ಈಚೆಗೆ ಬೆಳಕಿಗೆ ಬಂದಿದೆ.
ಅಂದು ಗೋಧ್ರಾ ಗಲಭೆ ವಿಚಾರಣೆ ಎಸ್ಐಟಿ ತಂಡದಲ್ಲಿದ್ದ ಹಾಗೂ ಈಚೆಗೆ ಸಿಬಿಐ ಮುಖ್ಯಸ್ಥರಾಗಿ ನಿವೃತ್ತರಾಗಿರುವ ಆರ್. ಕೆ ರಾಘವನ್ ತಮ್ಮ ಆತ್ಮಕಥನದಲ್ಲಿ ಮೋದಿ ಅವರ ಉಪವಾಸದ ಸನ್ನಿವೇಶವನ್ನು ಪ್ರಸ್ತಾಪಿಸಿದ್ದಾರೆ.
" ಮುಖ್ಯಮಂತ್ರಿಯಾಗಿದ್ದರೂ ಸರಿಯಾದ ಸಮಯಕ್ಕೆ ಗಾಂಧಿನಗರ ಎಸ್ಐಟಿ ಕಚೇರಿಗೆ ಬಂದು ತಮ್ಮ ಸಹೋದ್ಯೋಗಿಗಳು ಕೇಳಿದ 100 ಕ್ಕೂ ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸಿದರು. ಒಂದೇ ಒಂದು ಪ್ರಶ್ನೆಗೂ ಹಾರಿಕೆ ಉತ್ತರ ನೀಡುವುದಾಗಲಿ, ನುಣುಚಿಕೊಳ್ಳುವ ಪ್ರಯತ್ನ ಮೋದಿ ಅವರು ಮಾಡಲಿಲ್ಲ. ಒಂಭತ್ತು ತಾಸು ನಡೆದ ವಿಚಾರಣೆ ಸಂದರ್ಭದಲ್ಲಿ ನಡುವೆ ಚಹ ಕುಡಿಯಲು ಕೊಟ್ಟರೆ ನಿರಾಕರಿಸಿದರು, ತಾವೇ ತಂದಿದ್ದ ನೀರನ್ನು ಮಾತ್ರ ಸೇವಿಸಿದರು.
ಊಟ ಅಥವಾ ವಿರಾಮ ಪಡೆಯಲೂ ಒಪ್ಪಲಿಲ್ಲ. ವಿಚಾರಣೆ ನಡೆಸುತ್ತಿದ್ದ ತಮ್ಮ ಸಹೋದ್ಯೋಗಿ ಅಶೋಕ್ ಮಲ್ಹೋತ್ರಾ ಸಂಪೂರ್ಣ ಸುಸ್ತಾಗಿ, ಮೋದಿ ಅವರಿಗೆ ವಿಶ್ರಾಂತಿ ಬೇಡದಿರಬಹುದು ಆದರೆ ತಮಗೆ ವಿಶ್ರಾಂತಿ ಬೇಕೆಂದು ಹೇಳಿ ವಿರಾಮ ಪಡೆದರು. ಮೋದಿ ಅವರ ಸಾಮರ್ಥ್ಯ ನಿಜಕ್ಕೂ ಆಶ್ಚರ್ಯ ತಂದಿತ್ತು ಎಂದು ರಾಘವನ್ ಬರೆದುಕೊಂಡಿದ್ದಾರೆ. ಇದು ಮೋದಿ ಉಪವಾಸದ ಸಾಮರ್ಥ್ಯ.
PublicNext
27/10/2020 12:50 pm