ರಾಮನಗರ : ಇಬ್ಬರು ರೌಡಿಗಳ ಸಹಚರರ ಗುಂಪು ಹಾಡಹಗಲೇ ನಗರದ ಜಿಲ್ಲಾ ನ್ಯಾಯಾಲಯದ ಹೊರ ಭಾಗದಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಪರಸ್ಪರ ಹಲ್ಲೆಗೆ ಮುಂದಾಗಿದ್ದು, ಪೊಲೀಸರು ಸಕಾಲಕ್ಕೆ ಮಧ್ಯ ಪ್ರವೇಶಿಸಿ ಸಂಭವಿಸಬಹುದಾದ ಅನಾಹುತ ತಪ್ಪಿಸಿದ್ದಾರೆ.
ರೌಡಿಗಳಾದ ಮತಿನ್ ಮತ್ತು ಸಯಾನ್ ಖಾನ್ ಸಹಚರರ ಗುಂಪು ಲಾಂಗು, ಮಚ್ಚು ಹಿಡಿದು ಪರಸ್ಪರ ಘರ್ಷಣೆಗೆ ಮುಂದಾಗಿದ್ದವು. ನ್ಯಾಯಾಲಯದ ಬಳಿಯೇ ಮಧ್ಯಾಹ್ನ ಇಂತಹದೊಂದು ಘಟನೆ ಜರುಗಿದ್ದು ಜನರನ್ನು ಆತಂಕಕ್ಕೀಡಾಗಿದೆ..
ಘಟನೆ ಸಂಬಂಧ ಐಜೂರು ಠಾಣೆ ಪೊಲೀಸರು ಕಾನೂನು ಸಂಘರ್ಷಕ್ಕೆ ಒಳಗಾದ ನಾಲ್ವರು ಬಾಲಕರು ಸೇರಿದಂತೆ 10 ಮಂದಿಯನ್ನು ಬಂಧಿಸಿ ಹೆಡೆಮುರಿ ಕಟ್ಟಿದ್ದಾರೆ. ನಾಲಬಂದವಾಡಿ ಬಡಾವಣೆ ವಾಸಿ ಮತಿನ್, ಯಾರಬ್ ನಗರ ಬಡಾವಣೆ ವಾಸಿ ಸಯಾನ್ ಖಾನ್, ಸಮೀರ್, ಮುಹಿಬ್, ಸೈಯದ್ ನದೀಂ, ಮಹಮ್ಮದ್ ಫಾರೂಕ್ ಬಂಧಿತರು.
ಪ್ರಕರಣದ ವಿವರ:
ಮತಿನ್ ಮತ್ತು ಸಯಾನ್ ಖಾನ್ ನಡುವೆ ವೈಯಕ್ತಿಕ ದ್ವೇಷದ ಕಾರಣ ಹಲವು ವರ್ಷಗಳಿಂದ ಗಲಾಟೆ ನಡೆಯುತ್ತಲೇ ಇತ್ತು. 2023ರಲ್ಲಿ ಸಯಾನ್ ತನ್ನ ಸ್ನೇಹಿತ ಅದ್ನಾನ್ ಪಾಷನೊಂದಿಗೆ ಬೈಕಿನಲ್ಲಿ ತೆರಳುತ್ತಿದ್ದಾಗ ರೈಲ್ವೆ ನಿಲ್ದಾಣ ವೃತ್ತದಲ್ಲಿ ಮತಿನ್ ತನ್ನ 8 ಸ್ನೇಹಿತರೊಂದಿಗೆ ಲಾಂಗ್ ನಿಂದ ಹಲ್ಲೆ ನಡೆಸಿದ್ದನು. ಈ ಸಂಬಂಧ ಅದ್ನಾನ್ ಪಾಷ 9 ಮಂದಿ ವಿರುದ್ಧ ರಾಮನಗರ ಪುರ ಠಾಣೆಯಲ್ಲಿ ದೂರು ದಾಖಲಿಸಿದ್ದನು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಯಾನ್, ನದೀಂ, ಫಾರೂಕ್, ಫಜಲ್, ಅಕ್ಬರ್ ಖಾನ್ ನ್ಯಾಯಾಲಯಕ್ಕೆ ಹಾಜರಾದರೆ, ಅವರ ಜೊತೆಯಲ್ಲಿ ಬಂದಿದ್ದ ಶಾಹುಲ್, ಮಹಮ್ಮದ್ ನವಾಜ್ ಪಾಷ, ಸುಹೇಬ್ ಪಾಷ, ಮಹಮ್ಮದ್ ಜುನೇದ್ ಪಾಷ ಕೋರ್ಟ್ ರಸ್ತೆಯಲ್ಲಿ ನಿಂತಿದ್ದರು. ಇದೇ ಸಮಯಕ್ಕೆ ರೌಡಿ ಮತೀನ್ ತನ್ನ ಸಹಚರರಾದ ಸಮೀರ್, ಮುಹಿಬ್, ಮಹಮ್ಮದ್ ಫಾರೂಕ್ ರೊಂದಿಗೆ ಬಂದಿದ್ದಾನೆ.
ಮತೀನ್ ಮತ್ತು ಸಯಾನ್ ಖಾನ್ ಮಧ್ಯಾಹ್ನ 12 ಗಂಟೆಯಲ್ಲಿ ಪ್ರಕರಣದ ವಿಚಾರಣೆ ಮುಗಿಸಿಕೊಂಡು ಹೊರಗಡೆ ಬಂದಿದ್ದಾರೆ.
ಮತೀನ್, ಸಮೀರ್, ಮುಹಿಬ್, ಮಹಮ್ಮದ್ ಫಾರೂಕ್ ಕೋರ್ಟ್ ರಸ್ತೆಯಲ್ಲಿ ನಿಂತಿದ್ದ ಸಯಾನ್ ಸಹಚರರಾದ ಶಾಹುಲ್, ಮಹಮ್ಮದ್ ನವಾಜ್ ಪಾಷ, ಸುಹೇಬ್ ಪಾಷ, ಮಹಮ್ಮದ್ ಜುನೇದ್ ಪಾಷ ಬಳಿ ಹೋಗಿ ಮಚ್ಚುಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಸಯಾನ್ ಸಹಚರರು ಕೂಡ ಬೆನ್ನಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆಗೆ ಮುಂದಾಗಿದ್ದಾರೆ.
ಉಭಯ ಗುಂಪುಗಳು ನ್ಯಾಯಾಲಯದ ಹೊರ ಭಾಗದಿಂದ ನಾಲಬಂದವಾಡಿ ಸೇರುವ ಸೇತುವೆವರೆಗೂ ಮಾರಕಾಸ್ತ್ರಗಳಿಂದ ಹಿಡಿದು ಪರಸ್ಪರ ಹಲ್ಲೆಗೆ ಬೆನ್ನಟ್ಟಿ ಓಡಾಡಿದ್ದಾರೆ. ತಕ್ಷಣ ಎಚ್ಚೆತ್ತ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಡಿವೈಎಸ್ಪಿ, ವೃತ್ತ ನಿರೀಕ್ಷಕ ಹಾಗೂ ಸಬ್ ಇನ್ಸ್ಪೆಕ್ಟರ್ ಗಳು ಸ್ಥಳಕ್ಕೆ ಧಾವಿಸಿ ಅನಾಹುತ ತಪ್ಪಿಸಿದರು. ಐಜೂರು ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ.
Kshetra Samachara
11/01/2025 01:39 pm