ರಾಮನಗರ: ತಾಲ್ಲೂಕಿನ ಕೈಗಾರಿಕಾ ಪ್ರದೇಶದ ಭೈರಮಂಗಲ ರಸ್ತೆಯಲ್ಲಿ ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿಎಲ್) ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ (ವೇಸ್ಟ್ ಟು ಎನರ್ಜಿ–ಡಬ್ಲ್ಯುಟಿಇ) ಸ್ಥಾವರದಲ್ಲಿ ಶನಿವಾರ ಸಂಜೆ ಬಿಸಿ ಬೂದಿ ಸಿಡಿದು ಐವರು ಕಾರ್ಮಿಕರು ಗಾಯಗೊಂಡಿದ್ದಾರೆ.
ಉತ್ತರಪ್ರದೇಶ ಮೂಲದ ಅಮಲೇಶ್, ಉಮೇಶ್, ಸಂಟೋನ, ಬಿಹಾರ ತಕೂನ್ ಹಾಗೂ ಲಖನ್ ಗಾಯಾಳುಗಳು. ಎಲ್ಲರಿಗೂ ಸ್ಥಳೀಯವಾಗಿ ಚಿಕಿತ್ಸೆ ನೀಡಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಗಾಯಾಳುಗಳಲ್ಲಿ ಇಬ್ಬರಿಗೆ ಶೇ 60ಕ್ಕಿಂತಲೂ ಹೆಚ್ಚಿನ ಸುಟ್ಟ ಗಾಯಗಳಾಗಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ.
ಸ್ಥಾವರದಲ್ಲಿರುವ ಬಾಯ್ಲರ್‌ಗೆ ಒಣ ತ್ಯಾಜ್ಯ ಹಾಕಿದ ಬಳಿಕ ಅದು ಉರಿದು ಬೂದಿಯಾಗಿ ಹೊರಬರಲಿದೆ. ಸಂಜೆ 5ರ ಸುಮಾರಿಗೆ ಬಾಯ್ಲರ್ಗೆ ಹಾಕಿದ್ದ ಕಸವು ಉರಿದು ಬೂದಿಯಾಗಿ ಹೊರಬಾರದೆ ಕಟ್ಟಿಕೊಂಡಿತ್ತು. ಆಗ, ಕರ್ತವ್ಯದಲ್ಲಿದ್ದ ಕಾರ್ಮಿಕರು ಬೂದಿ ಬರುವ ಕೊಳವೆ ಮಾರ್ಗ ತೆರೆದು ಬೂದಿ ತೆರವು ಮಾಡಲು ಮುಂದಾಗಿದ್ದರು.
ಅತಿಯಾದ ಶಾಖವಿರುವ ಕೊಳವೆ ಮಾರ್ಗವನ್ನು ತೆರೆಯುತ್ತಿದ್ದಂತೆ ಒಳಗಿದ್ದ ಬೂದಿ ಕಾರ್ಮಿಕರ ಮೇಲೆ ಸಿಡಿದಿದೆ. ಬಿಸಿಯಾದ ಬೂದಿ ಮೈಮೇಲೆ ಬಿದ್ದು ಕಾರ್ಮಿಕರ ಮೈಯೆಲ್ಲಾ ಸುಟ್ಟಿದೆ. ಇದನ್ನು ಗಮನಿಸಿದ ಇತರ ಕಾರ್ಮಿಕರು ಹಾಗೂ ಅಧಿಕಾರಿಗಳು ಕೂಡಲೇ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಕರೆ ತಂದಿದ್ದಾರೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಟಿ.ವಿ. ಸುರೇಶ್, ರಾಮಚಂದ್ರಪ್ಪ, ಡಿವೈಎಸ್‌ಪಿ ದಿನಕರ ಶೆಟ್ಟಿ, ಬಿಡದಿ ಠಾಣೆ ಇನ್ಸ್‌ಪೆಕ್ಟರ್ ಶಂಕರ್ ನಾಯಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಕುರಿತು, ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
05/01/2025 03:39 pm