ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಜನ ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ದು ಒಂದೆಡೆಯಾದರೆ, ಪ್ರಮುಖ ದೇಗುಲಗಳಲ್ಲಿ ಜನರ ದಂಡೇ ಹರಿದು ಬಂದಿತ್ತು. ಆದ್ರೆ ವರ್ಷದ ಎರಡನೇ ದಿನವೂ ಮಂತ್ರಾಲಯಕ್ಕೆ ಭಕ್ತಸಾಗರ ಹರಿದು ಬಂದಿದೆ. ಸಾವಿರಾರು ಭಕ್ತರಿಂದ ಮಠದ ಪ್ರಾಂಗಣ ತುಂಬಿ ತುಳುಕುತ್ತಿತ್ತು.
ಹೊಸ ವರ್ಷದ ಎರಡನೇ ದಿನವೂ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ಭಕ್ತರ ದಂಡು ಆಗಮಿಸಿತ್ತು. ವರ್ಷದ ಮೊದಲ ಎರಡು ದಿನಗಳಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಮಠಕ್ಕೆ ಭಕ್ತರು ಆಗಮಿಸಿ ರಾಯರ ದರ್ಶನ ಪಡೆದಿದ್ದಾರೆ. ಗುರುವಾರದ ಉತ್ತರಾಷಾಢದ ಹಿನ್ನಲೆಯಲ್ಲಿ ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನಕ್ಕೆ ಶ್ರೀ ಮಠದ ಪೀಠಾಧಿಪತಿ ಸುಬುದೇಂದ್ರ ತೀರ್ಥರು ವಿಶೇಷ ಪೂಜೆ ಸಲ್ಲಿಸಿದರು.
ನಂತರ ಮೂಲ ರಾಮದೇವರ ಪೂಜೆ ನೆರವೇರಿಸಿದರು. ಈ ವೇಳೆ ವಿಶೇಷ ಪೂಜೆಯಲ್ಲಿ ಸಹಸ್ರಾರು ಭಕ್ತರು ಭಾಗವಹಿಸಿ, ರಾಯರ ದರ್ಶನ ಪಡೆದು ಪುನೀತರಾದರು. ಈ ವೇಳೆ ರಾಯರ ದರ್ಶನ ಪಡೆದ ಭಕ್ತರು ಹೇಳುವುದು ಹೀಗೆ...
ಭಕ್ತರ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಖಾಸಗಿ ವಸತಿ ಗೃಹಗಳನ್ನು ಬಾಡಿಗೆ ದರ 2 ಸಾವಿರದಿಂದ 5 ಸಾವಿರ ರೂ. ವರೆಗೆ ಏರಿಕೆ ಮಾಡಿದ್ದರಿಂದ ಭಕ್ತರು ಪರದಾಡಿದರು. ಅತ್ತ ಮಠದಲ್ಲೂ ಕೂಡ ಸೌಲಭ್ಯಗಳ ಕೊರತೆಯೂ ಇತ್ತು. ಇವುಗಳನ್ನು ಲೆಕ್ಕಿಸದ ಭಕ್ತರು ರಾಯರ ದರ್ಶನ ಪಡೆದಿದ್ದಾರೆ.
ಈ ವೇಳೆ ಮಾತನಾಡಿದ ಭಕ್ತರು ಹೊಸ ವರ್ಷದ ದಿನ ರಾತ್ರಿಯಿಡೀ ಪಾರ್ಟಿ ಮಾಡಿ, ಕುಣಿದು ಆಚರಿಸುವ ಬದಲಿಗೆ ಇಂತಹ ಧಾರ್ಮಿಕ ಸ್ಥಳಗಳಿಗೆ ಬಂದು ದೇವರ ದರ್ಶನ ಪಡೆದರೆ, ವರ್ಷವಿಡೀ ಪಾಸಿಟಿವ್ ಎನರ್ಜಿ ಬರುತ್ತೆ ಎನ್ನುತ್ತಾರೆ.
ಒಟ್ಟಾರೆಯಾಗಿ ವರ್ಷದ ಮೊದಲ ಎರಡೂ ದಿನಗಳು ರಾಯರ ಮಠಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡಿ ರಾಯರ ದರ್ಶನಾಶೀರ್ವಾದ ಪಡೆದಿದ್ದಾರೆ. ಈ ಒಂದು ಭಕ್ತ ಸಾಗರ ಸಂಕ್ರಾಂತಿ ಹಬ್ಬದ ವರೆಗೂ ಹೀಗೆ ಇರಲಿದೆ ಎಂಬ ಮಾತನ್ನು ಮಠದ ಆಡಳಿತ ಮಂಡಳಿ ಹೇಳುತ್ತಿದೆ.
PublicNext
04/01/2025 07:43 am