ರಾಯಚೂರು: ಕೇಂದ್ರ ಸರ್ಕಾರವು ಲಿಖಿತವಾಗಿ ಭರವಸೆ ನೀಡಿ, ಕೊಟ್ಟ ಮಾತಿಗೆ ತಪ್ಪಿ ಸದನದಲ್ಲಿ ವಿದ್ಯುತ್ ಬಿಲ್ ಮಂಡಿಸಿ, ಉಪಸಮಿತಿ ರಚಿಸಿದ್ದು ರೈತರನ್ನು ಆತಂಕಕ್ಕೆ ದೂಡಿದೆ. ಆದ್ದರಿಂದ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸ್ಮಾರ್ಟ್ ಮೀಟರ್ ಅಳವಡಿಕೆಯನ್ನು ವಿರೋಧಿಸಿ ನಾಳೆ ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳ ಕಚೇರಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಚಾಮರಸ ಮಾಲೀಪಾಟೀಲ ಹೇಳಿದ್ದಾರೆ.
ಕೇಂದ್ರವು ತರಲು ಉದ್ದೇಶಿಸಿರುವ ವಿದ್ಯುತ್ ಬಿಲ್ ಜಾರಿಯ ಉದ್ದೇಶ ವಿದ್ಯುತ್ ಉತ್ಪಾದನೆ, ಸಾಗಾಣಿಕೆ, ವಿತರಣೆ ಜವಾಬ್ದಾರಿಯನ್ನು ಖಾಸಗಿಯವರಿಗೆ ಒಪ್ಪಿಸುವುದಾಗಿದೆ. ಹೀಗಾದರೆ ಈಗ ರೈತರಿಗೆ 10 ಹೆಚ್.ಪಿ.ವರೆಗಿನ ಉಚಿತ ವಿದ್ಯುತ್ ಸ್ಥಗಿತಗೊಳಿಸುವುದು ಮತ್ತೇ ರೈತರಿಂದ ವಿದ್ಯುತ್ ಬಿಲ್ ವಸೂಲಿ ಮಾಡುವುದು ಸುಲಭವಾಗುತ್ತದೆ. ಕುಟೀರ ಜ್ಯೋತಿ, ಭಾಗ್ಯ ಜ್ಯೋತಿ ಯೋಜನೆಗಳಿಗೆ ಕತ್ತರಿ ಹಾಕುವ ಹುನ್ನಾರ ಅಡಗಿದೆ ಎಂದು ಆರೋಪಿಸಿದ ಅವರು, ಒಂದುವೇಳೆ ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸಿದರೆ, ಸರ್ಕಾರ ವಿಧಿಸುವ ತೆರಿಗೆ ಕಟ್ಟಲು ಶಕ್ತರಾಗಿಲ್ಲ ಎಂದರು.
ಕೃಷಿ ಖರ್ಚು ದುಪ್ಪಟ್ಟಾಗಿದೆ. ಕನಿಷ್ಠ ಬೆಂಬಲ ಬೆಲೆ ಸಿಗದೆ ರೈತ ಕಂಗಾಲಾಗಿರುವ ಈ ಸಂದರ್ಭದಲ್ಲಿ ರೈತರ ಮೇಲೆ ವಿದ್ಯುತ್ ಬರೆ ಎಳೆದರೆ, ಕೃಷಿ ಕ್ಷೇತ್ರಕ್ಕೆ ಪೆಟ್ಟು ಬೀಳುತ್ತದೆ. ಆಹಾರ ಉತ್ಪಾದನೆ ಕಡಿಮೆಯಾಗುತ್ತದೆ. ಒಂದು ವೇಳೆ ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ರೈತರು ಎಂಥ ಸಂಘರ್ಷಕ್ಕಾದರೂ ಸಿದ್ಧ ಎಂದು ಎಚ್ಚರಿಕೆ ನೀಡಿದ ಅವರು, ನಿಮ್ಮ 150 ಮಿಶನ್‌ನಲ್ಲಿ ಝೀರೋ ಕಳೆಯುವ ಶಕ್ತಿ ರೈತರ ಬಳಿ ಇದೆ. ಅದನ್ನು ಗಮನದಲ್ಲಿಟ್ಟುಕೊಂಡರೇ ಒಳಿತು ಎಂದು ಎಚ್ಚರಿಸಿದರು.
PublicNext
09/10/2022 05:55 pm