ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಯಚೂರು: ಅ.9ರೊಳಗೆ ಸರಕಾರ ಮೀಸಲಾತಿ ಘೋಷಣೆ ಮಾಡದಿದ್ದರೆ ಜಯಂತಿ ಬಹಿಷ್ಕಾರ ಎಚ್ಚರಿಕೆ

ರಾಯಚೂರು: ಅ.9 ರೊಳಗೆ ಸರಕಾರ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮೀಸಲಾತಿ ಹೆಚ್ಚಳ ಘೋಷಣೆ ಮಾಡದಿದ್ದರೆ ಸರಕಾರಿ ಪ್ರಾಯೋಜಿತ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಬಹಿಷ್ಕರಿಸುವ ಮೂಲಕ ಸಮಾಜದ ಬಂಧುಗಳು, ಜನಪ್ರತಿನಿಧಿಗಳು ತಮ್ಮ ಅಸಹನೆಯನ್ನು ಹೊರಹಾಕಲಿದ್ದಾರೆ ಎಂದು ಕರ್ನಾಟಕ ಸ್ವಾಭಿಮಾನಿ ಎಸ್‌ಸಿ-ಎಸ್‌ಟಿ ಸಂಘಟನೆಗಳ ಒಕ್ಕೂಟ ಮತ್ತು ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿಯ ಜಿಲ್ಲಾ ಮುಖಂಡ ಡಾ.ಪ್ರಭು ಎಸ್.ಹುಲಿನಾಯಕ ಹೇಳಿದರು.

ಸರಕಾರ ಪರಿಶಿಷ್ಟ ಪಂಗಡದವರಿಗೆ ಜನಸಂಖ್ಯೆ ಅನುಗುಣವಾಗಿ ಶೇ. 7.5ರ ಪ್ರಮಾಣದಲ್ಲಿ ರಾಜಕೀಯ ಮೀಸಲಾತಿಯನ್ನು ನೀಡಲಾಗಿದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ. 3ರ ಮೀಸಲಾತಿ ನೀಡುತ್ತಿರುವುದರಿಂದ ನಮ್ಮ ಬುಡಕಟ್ಟು ಜನಾಂಗ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಅತಿ ಹಿಂದುಳಿಯಲು ಕಾರಣವಾಗಿದ್ದು ಸಾಮಾಜಿಕ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಮೀಸಲಾತಿ ಹೆಚ್ಚಳಕ್ಕಾಗಿ ಸಮಾಜ ಜಗದ್ಗುರುಗಳಾದ ಶ್ರೀ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿಗಳು ಅನೇಕ ಬಾರಿ ಮನವಿ ಸಲ್ಲಿಸಿದರೂ ಮೀಸಲಾತಿ ಹೆಚ್ಚಳ ಮಾಡದ ಕಾರಣ ಮೀಸಲಾತಿ ಹೆಚ್ಚಳ ಮಾಡುವಂತೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ಕುಳಿತು 231 ದಿನಗಳಾಗುತ್ತ ಬಂದಿವೆ.

ಒಂದು ವೇಳೆ ಅ. 9 ರೊಳಗೆ ಮೀಸಲಾತಿ ಹೆಚ್ಚಳ ಪ್ರಕಟಿಸದಿದ್ದರೆ ಧರಣಿ ಸ್ಥಳಕ್ಕೆ ಎಸ್.ಸಿ ಸಮುದಾಯ ಸ್ವಾಮೀಜಿಗಳು ದಂಡು ಹಾಗೂ ಎಸ್.ಟಿ ಸಮುದಾಯದ ಜನರು ಬೆಂಗಳೂರಿಗೆ ದಾಂಗುಡಿ ಇಡಲಿದ್ದಾರೆ. ಅಲ್ಲಿ ಸ್ವಾಮೀಜಿಯವರು ತೋರುವ ಮಾರ್ಗದಲ್ಲಿ ಮುನ್ನಡೆಯಲು ಸಮಾಜ ಸಿದ್ಧವಿದೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.

Edited By : Somashekar
Kshetra Samachara

Kshetra Samachara

28/09/2022 08:08 pm

Cinque Terre

2.44 K

Cinque Terre

0