ರಾಯಚೂರು: ತಿರುಪತಿ ತಿಮ್ಮಪ್ಪನ ಭಕ್ತರಿಗೆ ಸಿಹಿ ಸುದ್ದಿ. ಇಂದಿನಿಂದ ಪೂರ್ಣಾ ಜಂಕ್ಷನ್‌ನಿಂದ ಬೀದರ್ ರಾಯಚೂರು ಮಾರ್ಗವಾಗಿ ತಿರುಪತಿಗೆ ಪ್ರಾಯೋಗಿಕ ರೈಲು ಸಂಚಾರ ಆರಂಭವಾಗಲಿದೆ ಎಂದು ಕೇಂದ್ರದ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.
ಪ್ರಾಯೋಗಿಕ ರೈಲು ಅಕ್ಟೋಬರ್ 2, 9, 16, 23 ಹಾಗೂ 30 ರ ಭಾನುವಾರ ರಾತ್ರಿ 11.15ಕ್ಕೆ ಪೂರ್ಣಾ ಜಂಕ್ಷನ್‍ನಿಂದ ಹೊರಟು, ಪರಭಣಿ, ಪರಳಿ, ಉದಗಿರ ಮೂಲಕ ಸೋಮವಾರ ಬೆಳಿಗ್ಗೆ 5.50ಕ್ಕೆ ಭಾಲ್ಕಿ ಹಾಗೂ ಬೆಳಿಗ್ಗೆ 6.30ಕ್ಕೆ ಬೀದರ್‌ಗೆ ಬರಲಿದೆ. ಜಹೀರಾಬಾದ್, ವಿಕಾರಾಬಾದ್, ಚಿತ್ತಾಪುರ, ಯಾದಗಿರಿ, ರಾಯಚೂರು, ಮಂತ್ರಾಲಯ ರಸ್ತೆ, ರೇನಿಗುಂಟಾ ಮಾರ್ಗವಾಗಿ ರಾತ್ರಿ 10.10ಕ್ಕೆ ತಿರುಪತಿ ತಲುಪಲಿದೆ ಎಂದು ಹೇಳಿದ್ದಾರೆ. ಅಕ್ಟೋಬರ್ 3, 10, 17, 24 ಮತ್ತು 31ರ ಸೋಮವಾರ ರಾತ್ರಿ 11.50ಕ್ಕೆ ತಿರುಪತಿಯಿಂದ ಹೊರಟು ಬಂದ ಮಾರ್ಗವಾಗಿಯೇ ಮಂಗಳವಾರ ಮಧ್ಯಾಹ್ನ 12ಕ್ಕೆ ಬೀದರ್ ಮತ್ತು ಮಧ್ಯಾಹ್ನ 12.45ಕ್ಕೆ ಭಾಲ್ಕಿಗೆ ಬರಲಿದೆ. ಸಂಜೆ 6.30ಕ್ಕೆ ಪೂರ್ಣಾ ಜಂಕ್ಷನ್ ತಲುಪಲಿದೆ ಎಂದು ತಿಳಿಸಿದ್ದಾರೆ.
ತಿರುಪತಿಯಿಂದ ಬೀದರ್‍ಗೆ ಬರಲು ವಿಕಾರಾಬಾದ್‍ವರೆಗೆ ಹಲವು ರೈಲುಗಳು ಇವೆ. ಅಲ್ಲಿಂದ ಬೀದರ್‌ಗೆ ತಲುಪಲು ಸಹ ನಾಲ್ಕೈದು ರೈಲುಗಳು ಇವೆ. ಹೀಗಾಗಿ ಬೀದರ್‌ನಿಂದ ತಿರುಪತಿಗೆ ಪ್ರಾಯೋಗಿಕ ರೈಲಿನ ಮೂಲಕ ಪ್ರಯಾಣ ಬೆಳೆಸಿ, ಬರುವಾಗ ವಿಶೇಷ ರೈಲಿನಲ್ಲಿ ಇಲ್ಲವೇ ಬೇರೆ ರೈಲುಗಳಲ್ಲಿ ಬೀದರ್‌ಗೆ ಬರಬಹುದು ಎಂದು ಹೇಳಿದ್ದಾರೆ. ಜಿಲ್ಲೆಯ ಜನ ಪ್ರಾಯೋಗಿಕ ರೈಲಿನ ಪ್ರಯೋಜನ ಪಡೆಯಬೇಕು ಎಂದು ಕೋರಿದ್ದಾರೆ.
PublicNext
02/10/2022 02:30 pm