ರಾಯಚೂರು : ಜಿಲ್ಲೆಯಲ್ಲಿ ಸಿಕ್ಕ ಸಿಕ್ಕವರು ಕೊರಳಲ್ಲಿ ಸೆತಸ್ಕೋಪ್, ಕೈಯಲ್ಲಿ ಸೂಚಿ ಹಿಡ್ಕೊಂಡು ಓಡಾಡ್ತಿದ್ದಾರೆ. ಗ್ರಾಮೀಣ ಭಾಗದ ಮನೆಗಳನ್ನೇ ಕ್ಲಿನಿಕ್ ಮಾಡಿಕೊಂಡಿದ್ದಾರೆ. ಒಂದಲ್ಲ ಎರಡಲ್ಲ, ಜಿಲ್ಲೆಯಲ್ಲಿ ಸಾವಿರಕ್ಕೂ ಹೆಚ್ಚು ನಕಲಿ ವೈದ್ಯರು ಪತ್ತೆಯಾಗಿದ್ದು, ಜಿಲ್ಲೆಯ ದೇವದುರ್ಗ ತಾಲೂಕಿನ ಮಾನಸಗಲ್ ಕ್ರಾಸ್ ಬಳಿ ಬೆಂಗಾಳಿ ನಕಲಿ ವೈದ್ಯರು ಜನರ ಜೀವದ ಜೊತೆ ಚೆಲ್ಲಾಟವಾಡ್ತಿರೋದು ಬಯಲಿಗೆ ಬಂದಿದೆ.
ರಹಸ್ಯ ಕಾರ್ಯಾಚರಣೆಯಲ್ಲಿ ನಕಲಿ ವೈದ್ಯರ ಅಸಲಿ ಮುಖ ಬಟಾಬಯಲಾಗಿದೆ. ಕಾಲು ನೋವು ಅಂತಾ ಹೋದ ನಮಗೆ ನೈಟಿ ಹಾಕ್ಕೊಂಡೇ ಈಕೆ ಮನಸಿಗೆ ಬಂದಂತೆ ಇಂಜೆಕ್ಷನ್ ಚುಚ್ಚಿ ನೂರಾರು ರೂಪಾಯಿ ವಸೂಲಿ ಮಾಡಿದ್ದಾಳೆ. ಅಂದಹಾಗೆ ಈಕೆ ಮತ್ತು ಈಕೆಯ ಪತಿ ಪಶ್ಚಿಮ ಬಂಗಾಳದಿಂದ ಇಲ್ಲಿಗೆ ವಲಸೆ ಬಂದಿದ್ದು 20 ವರ್ಷಗಳಿಂದ ಇಲ್ಲೇ ನಕಲಿ ಡಾಕ್ಟರ್ ಆಗಿ ಟೆಂಟ್ ಹೂಡಿದ್ದಾರೆ.
ನಕಲಿ ವೈದ್ಯೆ- ಇನ್ನು ಕೇವಲ ಇವರೊಬ್ಬರಷ್ಟೇ ಅಲ್ಲ, ಜಿಲ್ಲೆಯಾದ್ಯಂತ ನಕಲಿ ಡಾಕ್ಟರ್‌ಗಳ ಹಾವಳಿ ಮಿತಿ ಮೀರಿದೆ. ಪ್ರತಿ ಹಳ್ಳಿ ಹಳ್ಳಿಯಲ್ಲೂ ಇಬ್ಬರಿಂದ ಮೂವರು ನಕಲಿ ವೈದ್ಯರಿರೋದು ಬೆಳಕಿಗೆ ಬಂದಿದೆ.
ಅಂದಹಾಗೆ ಜಿಲ್ಲೆಯ ಗ್ರಾಮೀಣ ಭಾಗದ ಜನರು ಇಂತಹ ವೈದ್ಯರನ್ನೇ ನಂಬಿಕೊಂಡಿದ್ದಾರೆ. ಈ ಫೇಕ್ ಡಾಕ್ಟರ್ಸ್ ರೋಗಿಗಳನ್ನ ಬೇಗ ಗುಣಪಡಿಸೋಕೆ ಹೈ ಡೋಸೇಜ್ ಹಾಗೂ ಸ್ಟೀರಾಯ್ಡ್ ಬಳಸ್ತಾರೆ. ಸ್ವಲ್ಪ ಹೆಚ್ಚುಕಡಿಮೆ ಆದ್ರೂ ರೋಗಿಯ ಪ್ರಾಣಕ್ಕೆ ಸಂಚಕಾರ ಕಟ್ಟಿಟ್ಟಬುತ್ತಿ.
ಸದ್ಯ ರಾಯಚೂರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂತಹ ನಕಲಿ ವೈದ್ಯರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು. ಜೊತೆಗೆ ಹಳ್ಳಿ ಜನರಿಗೆ ಸೂಕ್ತ ವೈದ್ಯಕೀಯ ಸೌಲಭ್ಯವನ್ನೂ ಒದಗಿಸೋ ಮೂಲಕ ಇಂತಹ ನಕಲಿ ವೈದ್ಯರಿಗೆ ಗುದ್ದು ಕೊಡಬೇಕಿದೆ.
PublicNext
28/09/2022 07:05 pm