ರಾಯಚೂರು: ಕೋಟಾ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಪಿಡಿಓ ಗಜದಂಡಯ್ಯ ಸ್ವಾಮಿ ಅವರು ಬೈಕ್‌ನಲ್ಲಿ ಹೋಗಿದ್ದ ವೇಳೆ ತಡೆದು ಕೊಲೆ ಮಾಡಿದ ಘಟನೆ ನಡೆದಿದೆ.
ಗುರುವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಹಂತಕರು ಬನ್ನಿ ಕೊಡುವ ನೆಪದಲ್ಲಿ ಗಜದಂಡಯ್ಯ ಸ್ವಾಮಿ ಅವರನ್ನು ನಿಲ್ಲಿಸಿ ಕೊಲೆ ಮಾಡಿರುವ ಶಂಕೆ ಇದೆ. ಗಜ ದಂಡಯ್ಯ ಅವರು ಬೈಕನ್ನು ರಸ್ತೆಯಲ್ಲಿ ನಿಲ್ಲಿಸಿ, ಹೆಲ್ಮೆಟ್ ತೆಗೆದು ಬೈಕ್ ಮೇಲಿರಿಸಿದ್ದು, ಚಪ್ಪಲಿಯನ್ನೂ ತೆಗೆದಿಟ್ಟಿದ್ದಾರೆ. ಇದರಿಂದ ಅವರು ಬನ್ನಿಯೋ ಅಥವಾ ಯಾವುದೋ ಪ್ರಸಾದ ಸ್ವೀಕರಿಸಲು ನಿಂತಿದ್ದಾಗಲೋ ಅಥವಾ ದೇವರಿಗೆ ಕೈ ಮುಗಿಯುವಾಗ ಕೊಲೆ ಮಾಡಿರುವ ಶಂಕೆ ಇದೆ. ಲಿಂಗಸಗೂರಿನ ಸೀಮೆ ಈರಣ್ಣ ದೇವಸ್ಥಾನದ ಬಳಿ ಘಟನೆ ನಡೆದಿದ್ದು, ಬೈಕ್ ನಿಲ್ಲಿಸಿ ದೇವರಿಗೆ ನಮಸ್ಕಾರ ಮಾಡುವಾಗ ಹಲ್ಲೆ ನಡೆಯಿತೇ ಎನ್ನುವ ಸಂಶಯವೂ ಇದೆ. ಆರೋಪಿಗಳು ಪರಿಚಿತರಾಗಿರುವ ಸಾಧ್ಯತೆ ಹೆಚ್ಚಿದ್ದು, ಅದೇ ಕಾರಣಕ್ಕೆ ಬೈಕ್ ನಿಲ್ಲಿಸಿ ಅವರ ಜತೆ ಮಾತನಾಡುತ್ತಿದ್ದ ವೇಳೆ ದಾಳಿಯಾಗಿದೆ ಎಂಬ ಅನುಮಾನಗಳು ಕಾಣುತ್ತಿದೆ. ಬೈಕ್‌ನ ಸಮೀಪವೇ ಶವ ಬಿದ್ದಿದ್ದು, ದೇಹದ ತುಂಬೆಲ್ಲಾ ಹರಿತವಾದ ಆಯುಧದಿಂದ ಹೊಡೆದ ಗಾಯಗಳಿವೆ.
ಘಟನಾ ಸ್ಥಳಕ್ಕೆ ಲಿಂಗಸಗೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕೊಲೆ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಯಾವುದೋ ವಿಚಾರವೂ ಅಥವಾ ವೈಯಕ್ತಿಕ ಕಾರಣಕ್ಕೆ ನಡೆದಿದೆಯೇ ಎನ್ನುವುದು ತನಿಖೆಯಿಂದ ತಿಳಿಯಬೇಕಾಗಿದೆ.
PublicNext
06/10/2022 07:31 pm