ರಾಯಚೂರು: ಅಕಾಲಿಕ ಮಳೆಯಿಂದ ಬೆಳೆದ ಫಸಲು ಕೈ ಸೇರುವ ಮೊದಲೇ ನಾಶವಾಗಿದೆ. ಹೆಚ್ಚು ಆದಾಯದ ನಿರೀಕ್ಷೆಯಲ್ಲಿದ್ದ ರೈತರು ಚಿಂತೆಗೀಡಾಗಿದ್ದಾರೇ, ಇದೇ ಕಾರಣ ಹೂವು, ತರಕಾರಿ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಗ್ರಾಹಕರಿಗೆ ತಲೆನೋವಾಗಿ ಪರಿಣಮಿಸಿದೆ.
ಇಂದು ಆಯುಧ ಪೂಜೆ, ನಾಳೆ ದಸರಾ ಆಚರಣೆ ಮಾಡಲಾಗುತ್ತದೆ. ಆದ್ರೆ ರಾಜ್ಯದಲ್ಲಿ ಸುಮಾರು 2 ತಿಂಗಳಿನಿಂದ ಸುರಿದ ನಿರಂತರ ಮಳೆಗೆ ತರಕಾರಿ, ಹೂವಿನ ಬೆಳೆಗಳು ಕೊಳೆತು ಹೋಗಿವೆ. ಹೀಗಾಗಿ ಮಾರುಕಟ್ಟೆಗೆ ತರಕಾರಿ ಬರುವ ಪ್ರಮಾಣ ಕಡಿಮೆಯಾಗಿ ಗ್ರಾಹಕರು ಹೂವು ತರಕಾರಿ ಬೆಲೆ ಕಂಡು ಹೌಹಾರುವಂತಾಗಿದೆ.
ಒಂದು ಕೆ.ಜಿ ಕ್ಯಾರೇಟ್ ಬೆಲೆ 100 ರೂ. ಮುಟ್ಟಿದೆ. ಕೆಜಿ ಬೀನ್ಸ್ 90 ರೂ.ಗೆ ಮಾರಾಟವಾಗುತ್ತಿದೆ. ಹಾಗಲ ಕಾಯಿಯೂ 80 ರೂ. ಮುಟ್ಟಿದೆ. ಸೀಮೆ ಬದನೆ ಮಾತ್ರ 50 ರೂ.ಗೆ ದೊರಕುತ್ತಿದೆ. ಆಯುಧ ಪೂಜೆಗೆ ಬಳಸಲಾಗುವ ಬೂದುಗುಂಬಳ ಕೂಡ ಗ್ರಾಹಕರ ಕೈ ಸುಡುತಿದ್ದು, ಕೆಜಿ 150 ರಿಂದ 200 ರೂ.ಗೆ ಮಾರಾಟವಾಗುತ್ತಿದೆ.
ಗಗನಕ್ಕೇರಿದ ಹೂ ಬೆಲೆ: ಆಯುಧ ಪೂಜೆಗೆ ವಾಹನಗಳು ಸೇರಿದಂತೆ ಇನ್ನಿತರ ವಸ್ತುಗಳ ಪೂಜೆಗೆ ಹೂಗಳನ್ನು ಬಳಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಭಾನುವಾರದಿಂದಲೇ ಹೂವುಗಳ ಬೆಲೆ ಹೆಚ್ಚಳವಾಗಿದೆ. ಕಳೆದ ವಾರ ಒಂದು ಮಾರಿಗೆ 100 ರೂ. ಇದ್ದ ಸೇವಂತಿಗೆ ಭಾನುವಾರ 200 ರೂ.ಗೆ ಮಾರಾಟವಾಗುತ್ತಿದ್ದುದು ಕಂಡುಬಂತು.
ಇನ್ನು ಬಿಡಿ ಹೂಗಳ ಬೆಲೆ ಕೂಡ ಗ್ರಾಹಕರ ಕೈ ಸುಡುತ್ತಿದೆ. ದೇವರಾಜ ಮಾರುಕಟ್ಟೆಯಲ್ಲಿ ಮಲ್ಲಿಗೆ ಹೂ ಕೆಜಿ ಒಂದಕ್ಕೆ 1000 ರೂ., ಕಾಕಡ 800 ರೂ., ಮರ್ಲೆ 800 ರೂ., ಸುಗಂಧರಾಜ 300 ರೂ., ಕನಕಾಂಬರ 1500 ರೂ., ಗುಲಾಬಿ ಹೂ ಕೆಜಿಗೆ 400 ರೂ.ಗೆ ಮಾರಾಟವಾಗಿದೆ.
PublicNext
04/10/2022 08:08 am