ರಾಯಚೂರು: ತಾಲೂಕಿನ ಕಲ್ಮಲಾ ಬಳಿಯ ತುಂಗಭದ್ರಾ ಎಡದಂಡೆ ಕಾಲುವೆ ಹೈಡ್ರಲ್ ನಲ್ಲಿ ಸೆಲ್ಫಿ ಕ್ರೇಜ್‌ನಿಂದ ಕಾಲು ಜಾರಿ ನೀರಿಗೆ ಬಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಒಂದು ದಿನದ ಬಳಿಕ ಶವವಾಗಿ ಪತ್ತೆಯಾಗಿದ್ದಾರೆ. ನಗರದ ವಿದ್ಯಾನಿಧಿ ಕಾಲೇಜಿನ ಪಿಯುಸಿ ದ್ವಿತೀಯ ವರ್ಷದ ಸುಜಿತ್(16) ಮತ್ತು ವೈಭವ್ (16) ಮೃತರು.
ಎನ್ ಆರ್ ಶೆಟ್ಟಿ ಎಂಬುವವರಿಗೆ ಸೇರಿದ ಕಾರ್ಯಸ್ಥಗಿತಗೊಂಡಿರುವ ಹೈಡ್ರಲ್ ಪ್ರಾಜೆಕ್ಟ್ ನಲ್ಲಿ ದುರಂತ ನಡೆದಿದೆ. ಸೆ.18ರಂದು ಮಧ್ಯಾಹ್ನ ನಾಪತ್ತೆಯಾಗಿದ್ದ ವಿದ್ಯಾರ್ಥಿಗಳು ಮಾರನೇ ದಿನ ಶವವಾಗಿ ಪತ್ತೆಯಾಗಿದ್ದಾರೆ. ಪಿಕ್ ನಿಕ್ ಗಾಗಿ ತೆರಳಿದ್ದ ವೇಳೆ ಸೆಲ್ಫಿ ತೆಗೆಯುವಾಗ ಕಾಲುವೆಗೆ ಬಿದ್ದಿದ್ದಾರೆ. ಸರಿಯಾಗಿ ಈಜು ಬಾರದ ಹಿನ್ನೆಲೆ ಇಬ್ಬರೂ ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ. ಇನ್ನಿಬ್ಬರು ವಿದ್ಯಾರ್ಥಿಗಳಾದ ನಾಗೇಂದ್ರ ಹಾಗೂ ತರುಣ್ ಈಜಿ ದಡ ಸೇರಿದ್ದಾರೆ.
ನಿನ್ನೆ ಸಂಜೆಯಿಂದ ಪೊಲೀಸರು ಹಾಗೂ ಅಗ್ನಿಶಾಮಕ ದಳ ನಿರಂತರವಾಗಿ ಶೋಧ ಕಾರ್ಯ ನಡೆಸಿತ್ತು. ಮುಂಜಾವ ಘಟನಾ ಸ್ಥಳದಿಂದ 200 ಮೀಟರ್ ದೂರದಲ್ಲಿ ಮೃತದೇಹಗಳು ಪತ್ತೆಯಾಗಿವೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯಲ್ಲಿ ಮೃತ ಪಟ್ಟ ವಿದ್ಯಾರ್ಥಿ ವೈಭವ್ ತಂದೆ 2009ರ ಪ್ರವಾಹದ ವೇಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಪ್ರಾಣ ಬಿಟ್ಟಿದ್ದರು. ಈಗ ಮಗ ಕೂಡ ಕಾಲುವೆಯಲ್ಲಿ ಕೊಚ್ಚಿಕೊಂಡು ಹೋಗಿ ಪ್ರಾಣ ಬಿಟ್ಟಿರುವುದು ಕಾಕತಾಳೀಯವಾದರೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
PublicNext
19/09/2022 10:20 pm