ವಿಧಿಯೇ ನೀನೆಷ್ಟು ಕ್ರೂರಿ..? ಅದೊಂದು ಸುಂದರವಾದ ಕುಟುಂಬ ತಾಯಿ, ಮಗ, ಸೊಸೆ, ಮಕ್ಕಳು ಹೀಗೆ ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿದ್ದಾಗ ಇಡೀ ಜಗತ್ತನ್ನೇ ತಲ್ಲಣಗೊಳಿಸಿದ ಕೋರೋನಾ ಮಹಾಮಾರಿ ಮಗ ಮತ್ತು ತಾಯಿಗೆ ವಕ್ಕರಿಸಿತು. ತಾಯಿ ದೇವರ ದಯದಿಂದ ಕೊರೊನಾದಿಂದ ಪಾರಾಗಿದ್ದಾರೆ. ಆದ್ರೆ ಮನೆಗೆ ಆಧಾರ ಸ್ತಂಭವಾಗಿದ್ದ ಮಗ ಮಹಾಮಾರಿ ಕೊರೊನಾದಿಂದ ದೃಷ್ಟಿ ಕಳೆದುಕೊಳ್ಳಬೇಕಾಯಿತು. ಮಗ ಕೊರೊನಾದಿಂದ ದೃಷ್ಟಿ ಕಳೆದುಕೊಂಡರೆ, ಮಹಾ ಮಳೆ ಬದುಕನ್ನೆ ಕಸಿದುಕೊಂಡಿದೆ. ಎಲ್ಲವನ್ನೂ ಕಳೆದುಕೊಂಡು ಅತಂತ್ರ ಸ್ಥಿತಿಯಲ್ಲಿರುವ ಈ ಕುಟುಂಬದ ಕರುಣಾಜನಕ ಕಹಾನಿ ಹೇಳ್ತೀವಿ ಕೇಳಿ..
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಬಸ್ತಿಕೆರೆ ಓಣಿಯ ನಿವಾಸಿ ಬಸವರಾಜ ನಿಂಗಪ್ಪ ಮಡಿವಾಳರ ಎಂಬ ವ್ಯಕ್ತಿ ಕೊರೊನಾ ಎಂಬ ಮಹಾಮಾರಿಯಿಂದ ದೃಷ್ಟಿ ಕಳೆದುಕೊಂಡಿದ್ದಾರೆ. ಈಗ ಅತಿಯಾದ ಮಳೆ ಬದುಕನ್ನೇ ಕಸಿದುಕೊಂಡಿದೆ. ಸದ್ಯ ಈ ಕುಟುಂಬದ ರಕ್ತ ಕಣ್ಣೀರಿನ ಗೋಳು ಕೇಳೋರು ಯಾರು? ಎನ್ನುವಂತಾಗಿದೆ. ಬದುಕು ಸಾಗಿಸಲು ಇರುವ ಪುಟ್ಟ ಮನೆಯು ಸತತವಾಗಿ ಸುರಿದ ಮಳೆಗೆ ಮನೆ ಕಳೆದುಕೊಂಡು ಬೀದಿಗೆ ಬಂದಿದ್ದಾರೆ.
ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ ಬಸವರಾಜ ಕೊರೊನಾ ಹೊಡೆತದಿಂದ ದೃಷ್ಟಿ ಕಳೆದುಕೊಂಡು ಸಂಪೂರ್ಣ ದೌರ್ಬಲ್ಯವಾಗಿದ್ದಾರೆ. ಹೆಂಡತಿಯೇ ಕೂಲಿ ಮಾಡಿ ಅವರಿವರ ಮನೆಯ ಕೆಲಸ ಮಾಡಿ ಜೀವನ ಸಾಗಿಸುತ್ತಿರುವಾಗ ಇದ್ದ ಮನೆಯು ಮಳೆಯಿಂದ ಕುಸಿದು ಬಿದ್ದಿದೆ. ಸದ್ಯ ಬದುಕು ಬೀದಿಗೆ ಬಂದಿದೆ. ತುತ್ತು ಅನ್ನಕ್ಕಾಗಿ ಪರದಾಡುವ ಸ್ಥಿತಿ ಇವರ ಕುಟುಂಬಕ್ಕೆ ಬಂದಿದೆ. ಅವರಿವರ ಮನೆಯ ಮುಂದೆ ಆಶ್ರಯ ಪಡೆದು ಕಣ್ಣು ಕಾಣದ ಗಂಡ ಎರಡು ಪುಟ್ಟ ಮಕ್ಕಳು ವಯಸ್ಸಾದ ಅತ್ತೆ, ಬಿದ್ದ ಮನೆ ಕಳೆದುಕೊಂಡು ಹೀಗೆ ಬಸವರಾಜ ಪತ್ನಿ ನಿರ್ಮಲಾ ಜೀವನ ಸಾಗಿಸುತ್ತಿದ್ದಾರೆ.
ದೃಷ್ಟಿಹೀನ ಗಂಡ ಒಂದು ಕಡೆ ಆದರೆ ಇನ್ನೊಂದು ಕಡೆ ಮನೆಯೂ ಇಲ್ಲದ ಇವರ ಕುಟುಂಬದ ಬಾಳು ಈಗ ನರಕ ಸದೃಶ್ಯವಾಗಿದೆ.
ವರದಿ- ಸುರೇಶ ಲಮಾಣಿ ಪಬ್ಲಿಕ್ ನೆಕ್ಸ್ಟ ಗದಗ
PublicNext
01/09/2022 08:11 pm