ಅಹಮದಾಬಾದ್ : ಕಾಂಗ್ರೆಸ್ ನೇತೃತ್ವದ ಯುಪಿಎ ಅವಧಿಯಲ್ಲಿ ಭಾರತದ ಆರ್ಥಿಕ ಚಟುವಟಿಕೆ ಸ್ಥಗಿತಗೊಂಡಿದ್ದವು ಮತ್ತು ಅಂದಿನ ಪಿಎಂ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಯಾವುದೇ ನಿರ್ಧಾರಗಳನ್ನೇ ಕೈಗೊಳ್ಳುತ್ತಿರಲಿಲ್ಲ ಎಂದು ಇನ್ಫೋಸಿಸ್‌ನ ಸಂಸ್ಥಾಪಕ ಅಧ್ಯಕ್ಷ ಎನ್.ಆರ್.ನಾರಾಯಣ ಮೂರ್ತಿ ಕಿಡಿಕಾರಿದ್ದಾರೆ.
ಇಲ್ಲಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಕ್ಯಾಂಪಸ್‌ನಲ್ಲಿ ಯುವ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ ಮೂರ್ತಿ '2008-2012ರ ಅವಧಿಯಲ್ಲಿ ನಾನು ಲಂಡನ್‌ನ ಎಚ್‌ಎಸ್‌ಬಿಸಿ ಬ್ಯಾಂಕ್‌ನ ಮಂಡಳಿ ಸದಸ್ಯನಾಗಿದ್ದೆ.
ಆಗ ಮೊದಲಿನ ಕೆಲ ವರ್ಷ, ಸಭೆಗಳಲ್ಲಿ ಚೀನಾದ ಹೆಸರನ್ನು 2-3 ಬಾರಿ ಪ್ರಸ್ತಾಪಿಸಿದರೇ ಭಾರತದ ಹೆಸರು ಕೇವಲ ಒಂದು ಬಾರಿ ಪ್ರಸ್ತಾಪವಾಗುತ್ತಿತ್ತು. ಆದರೆ ದುರದೃಷ್ಟವಶಾತ್ ನಂತರದ ವರ್ಷದಲ್ಲಿ ಏನಾಯಿತೋ ಗೊತ್ತಿಲ್ಲ. ಮನಮೋಹನ್‌ಸಿಂಗ್ ಅವಧಿಯಲ್ಲಿ ದೇಶದ ಆರ್ಥಿಕತೆ ಸ್ಥಗಿತಗೊಂಡಿತು. ಯಾವುದೇ ವಿಷಯದ ಬಗ್ಗೆಯೂ ಸರ್ಕಾರ ನಿರ್ಧಾರ ಕೈಗೊಳ್ಳುತ್ತಿರಲಿಲ್ಲ ಮತ್ತು ಪ್ರತಿಯೊಂದೂ ವಿಳಂಬವಾಗುತ್ತಿತ್ತು' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
2012ರಲ್ಲಿ ನಾನು ಎಚ್‌ಎಸ್‌ಬಿಸಿಯನ್ನು ಬಿಟ್ಟಾಗ, ಸಭೆಯಲ್ಲಿ ಭಾರತದ ಹೆಸರು ಪ್ರಸ್ತಾಪವಾಗುತ್ತಿದ್ದುದ್ದೇ ಅಪರೂಪ, ಆದರೆ ಚೀನಾದ ಹೆಸರು ಕನಿಷ್ಠ 30 ಬಾರಿ ಪ್ರಸ್ತಾಪವಾಗುತ್ತಿತ್ತು. ಹೀಗಾಗಿ, ಎಲ್ಲೆಲ್ಲಿ ಬೇರೆ ದೇಶಗಳ ಹೆಸರಲ್ಲೂ, ಅದರಲ್ಲೂ ವಿಶೇಷವಾಗಿ ಚೀನಾ ಹೆಸರು ಪ್ರಸ್ತಾಪವಾದಾಗ, ಭಾರತದ ಹೆಸರೂ ಪ್ರಸ್ತಾಪವಾಗುವಂತೆ ಮಾಡುವುದು ಈಗಿನ ಭಾರತದ ಯುವ ಸಮೂಹದ ಹೊಣೆ. ನೀವು ಆ ಕೆಲಸ ಮಾಡುತ್ತೀರಿ ಎಂಬ ವಿಶ್ವಾಸವಿದೆ' ಎಂದು ಹೇಳಿದರು.
PublicNext
24/09/2022 03:54 pm