ಹಾವೇರಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ವಿಚಾರವಾಗಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅಡ್ಡಗಾಲಾಗುತ್ತಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ ನಮ್ಮ ಪರವಾಗಿದ್ದಾರೆ. ಅವರನ್ನು ತಿರುಪತಿಗೆ ಕರೆದೊಯ್ದು ಪಂಚಮಸಾಲಿಗೆ ಮೀಸಲಾತಿ ಕೊಡಕೂಡದೆಂದು ಯಡಿಯೂರಪ್ಪ ಹೇಳಿದ್ದಾರೆ. ಹೀಗಾಗಿ ಮೀಸಲಾತಿ ನೀಡುವಲ್ಲಿ ವಿಳಂಬವಾಗುತ್ತಿದೆ ಎಂದು ಬಿಜಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿ ಕಾರಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನೆ ಮುಂದೆ ಮಂಗಳವಾರ ರಾತ್ರಿ ನಡೆದ ಧರಣಿ ಸತ್ಯಾಗ್ರಹದಲ್ಲಿ ಅವರು ಮಾತನಾಡಿ, ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಮ್ಮ ವಿರೋಧಿಗಳಲ್ಲ. ಕೊಟ್ಟ ಮಾತಿನಂತೆ ನಡೆದುಕೊಳ್ಳಲು ಬೊಮ್ಮಾಯಿ ಅವರನ್ನು ಬಿಎಸ್‌ವೈ ಬಿಡುತ್ತಿಲ್ಲ. ತಿರುಪತಿಗೆ ಹೋಗಿ ಪಂಚಮಸಾಲಿಗಳಿಗೆ 2ಎ ಮೀಸಲಾತಿ ನೀಡದಂತೆ ಬಿಎಸ್‌ವೈ ಹೇಳಿರುವ ಕಾರಣ ಬೊಮ್ಮಾಯಿ ಅವರು ಮೀಸಲಾತಿ ನೀಡುವಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂದರು. ಮಂಗಳವಾರ ನಡೆದ ಅಧಿವೇಶನದಲ್ಲಿ ಎಲ್ಲ ಸಮಾಜಕ್ಕೆ ಮೀಸಲಾತಿ ನೀಡುವಂತೆ ಒತ್ತಾಯಿಸಲಾಗಿದೆ. ಅದಕ್ಕೆ ಎಲ್ಲ ಸಮಾಜದ ಶಾಸಕರು ಒಮ್ಮತವಾಗಿ ಬೆಂಬಲ ನೀಡಿದ್ದಾರೆ. ಅಧಿವೇಶನ ಮುಗಿಯುವ ಒಳಗಾಗಿ ಒಳ್ಳೆಯ ಸುದ್ದಿ ಸಿಗುವ ಲಕ್ಷಣಗಳು ಕಂಡುಬಂದಿವೆ. ಆದರೂ ಸಹ ನವೆಂಬರ್ 2ನೇ ವಾರದಲ್ಲಿ 25 ಲಕ್ಷ ಜನ ಸೇರಿ ವಿಧಾನಸೌಧ ಮುತ್ತಿಗೆ ಹಾಕಿ ಪ್ರತಿಭಟಿಸುವುದು ಅಥವಾ ಸನ್ಮಾನ ಸಮಾರಂಭ ಮಾಡುವುದು ನಿರ್ಧಾರವಾಗಲಿದೆ ಎಂದರು.
PublicNext
21/09/2022 02:06 pm