ನವದೆಹಲಿ: ರಾಮಲಿಂಗಮ್ ಕನ್ಸ್ಟ್ರಕ್ಷನ್ ಕಂಪನಿಯಿಂದ ಲಂಚ ಪಡೆದ ಕೇಸ್ ಬಗ್ಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ, ಸಂಸದ ಬಿ.ವೈ. ರಾಘವೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, "ಈ ಹಿಂದೆಯೇ ಪ್ರಕರಣವನ್ನು ನ್ಯಾಯಾಲಯ ವಜಾಗೊಳಿಸಿತ್ತು. ಆದರೂ ಖಾಸಗಿ ವ್ಯಕ್ತಿಯೊಬ್ಬರು ಮತ್ತೆ ತಮ್ಮ ಪ್ರಯತ್ನ ಮುಂದುವರಿಸಿದ್ದಾರೆ. ನಮ್ಮ ಕುಟುಂಬದ ವಿರುದ್ಧ ಮೊದಲಿನಿಂದಲೂ ಷಡ್ಯಂತ್ರ ನಡೆದಿದೆ. ಈ ವಿಷಯದಲ್ಲಿ ನಮ್ಮ ಕಾನೂನು ಹೋರಾಟ ಮುಂದುವರಿಯಲಿದೆ. ದೇಶದ ಸಂವಿಧಾನ ಮತ್ತು ಕಾನೂನಿನ ಮೇಲೆ ನಮಗೆ ನಂಬಿಕೆ ಇದೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಏನಿದು ಪ್ರಕರಣ?:
ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಅಧಿಕಾರ ದುರ್ಬಳಕೆ ಮಾಡಿಕೊಂಡು ಬಿಡಿಎ ಅರ್ಥಾತ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಸತಿ ಯೋಜನೆಗಳನ್ನು ಗುತ್ತಿಗೆ ನೀಡುವ ಸಲುವಾಗಿ ರಾಮಲಿಂಗಂ ಕನ್ಸ್ಟ್ರಕ್ಷನ್ ಕಂಪನಿಯಿಂದ ಕೋಟ್ಯಾಂತರ ರೂಪಾಯಿ ನಗದು ಪಡೆದಿದ್ದಾರೆ. ಜೊತೆಗೆ ಶೆಲ್ ಕಂಪನಿಗಳ ಮೂಲಕ ಲಂಚ ಪಡೆದಿದ್ದಾರೆ ಎಂದು ಆರ್ ಟಿಐ ಕಾರ್ಯಕರ್ತ ಟಿ.ಜೆ ಅಬ್ರಹಾಂ ಅವರು ಖಾಸಗಿ ದೂರು ದಾಖಲಿಸಿದ್ದರು.
ಈ ದೂರಿನ ಬಗ್ಗೆ ವಿಚಾರಣೆ ನಡೆಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಜಯಂತ್ ಕುಮಾರ್ ಅವರು ಯಡಿಯೂರಪ್ಪ ಮತ್ತು ಆರೋಪ ಹೊತ್ತ ಇತರರ ವಿರುದ್ಧ ಎಫ್ಐಆರ್ ದಾಖಲಿಸಿ, ತನಿಖೆ ನಡೆಸಿ ಹಾಗೂ ನವೆಂಬರ್ 2 ರ ಒಳಗೆ ವರದಿ ನೀಡುವಂತೆ ಲೋಕಾಯುಕ್ತ ಪೋಲಿಸರಿಗೆ ಕಟ್ಟು ನಿಟ್ಟಿನ ಆದೇಶ ನೀಡಿದ್ದಾರೆ.
ಇದರಿಂದ ಯಡಿಯೂರಪ್ಪ, ಬಿ.ವೈ. ವಿಜಯೇಂದ್ರ, ಸಂಜಯ್ ಶ್ರೀ, ಚಂದ್ರಕಾಂತ ರಾಮಲಿಂಗಂ, ಶಶಿಧರ ಮರಡಿ, ಎಸ್.ಟಿ.ಸೋಮಶೇಖರ್, ಡಾ.ಜಿ.ಸಿ.ಪ್ರಕಾಶ್, ವಿರುಪಾಕ್ಷಪ್ಪ, ಕೆ.ರವಿ ಅವರ ವಿರುದ್ಧ ಎಫ್ಐಆರ್ ದಾಖಲಾಗಲಿದ್ದು, ಇವರಿಗೆಲ್ಲಾ ಸಂಕಷ್ಟ ಎದುರಾಗಲಿದೆ. ಈ ಮೂಲಕ ಹಳೆಯ ಭ್ರಷ್ಟಾಚಾರ ಕೇಸ್ ಗೆ ಈಗ ಮರು ಜೀವ ಬಂದಿದೆ. ಇದು ಯಡಿಯೂರಪ್ಪ ಮತ್ತು ಇತರರ ಕೊರಳಿಗೆ ಯಾವ ರೀತಿ ಸುತ್ತಿಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.
PublicNext
15/09/2022 03:03 pm