ಬೆಂಗಳೂರು: ಮಂಗಳೂರಿನಲ್ಲಿ ಜನಮನ್ನಣೆಯ ಪ್ರಧಾನಿಗಳಾದ ನರೇಂದ್ರ ಮೋದಿಯವರ ಅಪಾರ ಜನಸಂದಣಿಯ ಕಾರ್ಯಕ್ರಮ ಮತ್ತು ದೊಡ್ಡಬಳ್ಳಾಪುರದ ಜನಸ್ಪಂದನಕ್ಕೆ ಸ್ವಯಂಪ್ರೇರಿತ ಜನಸಾಗರವನ್ನು ಗಮನಿಸಿ ಸಿದ್ದರಾಮಯ್ಯರು ಸ್ಥಿಮಿತ ಕಳೆದುಕೊಂಡಂತಿದೆ. ಅದಕ್ಕಾಗಿಯೇ ಅವರು ತಮ್ಮ ಸುಳ್ಳಿನ ಸರಮಾಲೆ, ವ್ಯರ್ಥ ಆರೋಪಗಳ ಮೂಲಕ ನಾಟಕ ಮುಂದುವರಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕನ್ನಡನಾಡಿನ ಜನತೆ ನಿರ್ಧರಿಸಿದ್ದು, ಅಧಿಕಾರ ಗಳಿಸುವ ಕಾಂಗ್ರೆಸ್ಸಿಗರ ಕನಸು ಕೇವಲ ಹಗಲುಗನಸಾಗಿ ಉಳಿಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ತಿಳಿಸಿದ್ದಾರೆ. ರಾಜ್ಯದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯರನ್ನು ಜನರು ಸೋಲಿಸಿ ರಾಜಕೀಯವಾಗಿ ಮೂಲೆಗುಂಪಾಗುವಂತೆ ಮಾಡಲಿದ್ದಾರೆ. ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಲಿದೆ.
ಸಿದ್ದರಾಮಯ್ಯ ಎಂದರೆ ಡೋಂಗಿತನ, ಹಿಂದೂ ವಿರೋಧಿತನದ ಸಂಕೇತ. ರಾಷ್ಟ್ರವಿರೋಧಿ ಶಕ್ತಿಗಳ ಜೊತೆ ಕೈ ಜೋಡಿಸುವ ಮತ್ತು ಧರ್ಮಗಳನ್ನು ಒಡೆಯುವ ಸಿದ್ದರಾಮಯ್ಯರ ಸ್ವಾರ್ಥ ರಾಜಕಾರಣ ಜನರಿಗೆ ಸ್ಪಷ್ಟವಾಗಿ ತಿಳಿದಿದೆ. ನೀವು ಟ್ವೀಟ್‌ಗಳ ಮೂಲಕ ಹಾಗೂ ಹೇಳಿಕೆಗಳ ಮೂಲಕ ನಿಮ್ಮನ್ನೇ ನೀವು ಜನರ ಮುಂದಿಟ್ಟು ಅಪಹಾಸ್ಯಕ್ಕೆ ಸಿಲುಕುತ್ತಿದ್ದೀರಿ. ಬಿಜೆಪಿ ಸರಕಾರ ಜನಪರವಾಗಿದೆ. ಬಿಜೆಪಿ ಯಾವತ್ತೂ ಸಮಾಜದ ಕಟ್ಟಕಡೆಯ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿ ಮತ್ತು ಸಶಕ್ತೀಕರಣದ ಪ್ರಯತ್ನದಲ್ಲಿರುವುದು ಜನರಿಗೆ ತಿಳಿದಿದೆ ಎಂದು ಅವರು ತಿಳಿಸಿದ್ದಾರೆ.
ಒಮ್ಮೆ ನಿರುದ್ಯೋಗ ಸಮಸ್ಯೆ ಎನ್ನುವ ಸಿದ್ದರಾಮಣ್ಣ, ಮತ್ತೆ ಪ್ಲೇಟ್ ಬದಲಿಸಿ ಶೇಕಡಾ 40 ಭ್ರಷ್ಟಾಚಾರ ಎಂದು ರಾಗ ಎಳೆಯುತ್ತಾರೆ. ಅರ್ಕಾವತಿ ಹಗರಣ ಸೇರಿ ವಿವಿಧ ಭ್ರಷ್ಟಾಚಾರ ಹಗರಣಗಳನ್ನು ಬಿಜೆಪಿ ಸರಕಾರ ಬಯಲಿಗೆ ಎಳೆಯಲಿದೆ ಎಂದು ತಿಳಿಸಿದ ಬಳಿಕ ಸಿದ್ದರಾಮಣ್ಣನಿಗೆ ಚಳಿಜ್ವರ ಬಂದಂತಿದೆ. ಅದಕ್ಕಾಗಿಯೇ ಸದಾ ಪ್ರಚಾರದಲ್ಲಿರಲು ಸುಳ್ಳು ಸುಳ್ಳು ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಅವರು ಸ್ಪಷ್ಟ ಮಾಹಿತಿ ಇಲ್ಲದೆ ಆರೋಪಗಳನ್ನು ಮಾಡುತ್ತಿದ್ದು, ಬಾಯಿ ಚಪಲಕ್ಕಾಗಿ ಮಾತನಾಡುತ್ತಿದ್ದಾರೆ. ಮಳೆ ಹಾನಿ ಸಂಬಂಧ ನೀವು ಮತ್ತು ನಿಮ್ಮ ಪಕ್ಷದವರು ಎಷ್ಟು ಪ್ರವಾಸ ಮಾಡಿದ್ದೀರಿ? ನಿನ್ನೆ ಕಾಟಾಚಾರಕ್ಕೆ ಬಾದಾಮಿಗೆ ಹೋಗಿ ಬಂದಿದ್ದಲ್ಲವೇ? ನಿಮ್ಮ ಅಸಲಿಯತ್ತು ನಮಗೆ ಮಾತ್ರವಲ್ಲದೆ ಜನರಿಗೂ ಗೊತ್ತಿದೆ. ನಕಲಿ ಸಮಾಜವಾದಿಗಳು, ನಕಲಿ ಬುದ್ಧಿಜೀವಿಗಳ ಜೊತೆ ಸೇರಿ ಮಾತನಾಡುವ ನಿಮ್ಮನ್ನು ಜನರು ನಂಬಲಾರದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ಷೇಪಿಸಿದ್ದಾರೆ.
PublicNext
11/09/2022 03:17 pm