ಬೆಳಗಾವಿ: ಶ್ರೀಗಣೇಶೋತ್ಸವ ವೇಳೆ ಗಣಪತಿ ಪ್ರತಿಷ್ಠಾಪನೆ ಜೊತೆಗೆ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾದ ಬಾಲ ಗಂಗಾಧರನಾಥ ತಿಲಕ್ ಹಾಗೂ ವೀರ ಸಾವರ್ಕರ್ ಅವರ ಭಾವಚಿತ್ರ ಬಳಸಲು ಮಹಾನಗರ ಪಾಲಿಕೆಯ ಅನುಮತಿ ಪಡೆಯಬೇಕು ಎಂಬ ಎಡಿಜಿಪಿ ಅಲೋಕ್ ಕುಮಾರ್ ಹೇಳಿಕೆಗೆ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕೆರಳಿದ್ದು, ಈ ಹೇಳಿಕೆಯನ್ನು ಅಲೋಕ್ ಕುಮಾರ್ ಕೂಡಲೇ ಹಿಂಪಡೆದು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.
ಇಂದು ಬೆಳಗಾವಿಯ ಬಾಗೇವಾಡಿಯಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಅವರು, ನಾವು ಯಾವ ದೇಶದಲ್ಲಿ ಇದ್ದೇವೆ? ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಅರ್ಧದಷ್ಟು ಆಯಸ್ಸನ್ನು ಮುಡಿಪಾಗಿಟ್ಟ ಈ ಮಹಾನ್ ವ್ಯಕ್ತಿಗಳ ಬಗ್ಗೆ ನಿಮಗೆ ಗೊತ್ತಿಲ್ಲವೇ? ಇವರ ಭಾವಚಿತ್ರ ಬಳಸಲು ಪರ್ಮಿಷನ್ ಬೇಕಾ? ಎಂದು ಆಕ್ರೊಶ ವ್ಯಕ್ತಪಡಿಸಿದರು. ಈ ರೀತಿಯ ಹೇಳಿಕೆಯಿಂದ ದೇಶಭಕ್ತಿ ಮತ್ತು ಸಂವಿಧಾನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತೆ. ಆದ್ದರಿಂದ ಎಡಿಜಿಪಿ ಕೂಡಲೇ ಕ್ಷಮೆ ಕೇಳಿ ತಮ್ಮ ಹೇಳಿಕೆಯನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.
ಗಣೇಶೋತ್ಸವದಲ್ಲಿ ಪೊಲೀಸರು ಡಿಜೆ ಮತ್ತು ಸೌಂಡ್ ಸಿಸ್ಟಮ್ ಬಳಸಲು ಅನುಮತಿ ನೀಡದ್ದಕ್ಕೆ ಕೂಡ ಆಕ್ಷೇಪಿಸಿದ ಮುತಾಲಿಕ್, ಈ ಹಿಂದೆ ಕೊರೊನಾ ವೇಳೆ ಸಾಕಷ್ಟು ಸಾಲಸೋಲ ಮಾಡಿ ಡಿಜೆ ಮತ್ತು ಸೌಂಡ್ ಸಿಸ್ಟಮ್ ಇಟ್ಟುಕೊಂಡು ದುಡಿಮೆ ಮಾಡುವವರು ತತ್ತರಿಸಿ ಹೋಗಿದ್ದರು. ಇದೀಗ ಎರಡು ವರ್ಷಗಳ ಬಳಿಕ ಅವರಿಗೆ ದುಡಿಮೆ ಸಿಗುತ್ತಿರುವ ವೇಳೆ ಡಿಜೆ ಮತ್ತು ಸೌಂಡ್ ಸಿಸ್ಟಮ್ ಬಳಕೆ ಮಾಡುವುದನ್ನು ನಿರ್ಬಂಧಿಸಿ ಅವರ ಜೀವನಕ್ಕೆ ಪೊಲೀಸ್ರು ಕಲ್ಲು ಹಾಕುತ್ತಿರುವುದು ಸರಿಯಲ್ಲ. ಇದನ್ನು ನಾವು ವಿರೋಧಿಸುತ್ತೇವೆ ಎಂದು ಕಿಡಿ ಕಾರಿದರು.
PublicNext
01/09/2022 03:45 pm