ಪಾಟ್ನಾ: ಬಿಜೆಪಿ ಮೈತ್ರಿಯಿಂದ ಹೊರ ಬಂದ ಆರ್‌ಜೆಡಿ ನಾಯಕ ನಿತೀಶ್ ಕುಮಾರ್ ಅವರು ಆಗಸ್ಟ್ 10ರಂದು ಬಿಹಾರದಲ್ಲಿ ಮಹಾಘಟಬಂಧನ್ ಸರ್ಕಾರ ರಚಿಸಿದ್ದರು. ಸರಿಯಾಗಿ 22 ದಿನಗಳ ನಂತರ ನಿತೀಶ್ ಕುಮಾರ್ ಅವರ ಸಂಪುಟದಿಂದ ಮೊದಲ ರಾಜೀನಾಮೆ ನಡೆದಿದೆ.
ನಿತೀಶ್ ಕುಮಾರ್ ನೇತೃತ್ವದ ನೂತನ ಸರ್ಕಾರದಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ 23 ಸಚಿವರ ಪೈಕಿ 17 ಮಂದಿಯ ಮೇಲೆ ಕ್ರಿಮಿನಲ್ ಕೇಸ್ ಇರುವುದಾಗಿ ಈಚೆಗಷ್ಟೇ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಮಾಹಿತಿ ನೀಡಿತ್ತು. ಈ ಬೆನ್ನಲ್ಲೇ ಕಬ್ಬು ಕೈಗಾರಿಕಾ ಸಚಿವ ಕಾರ್ತಿಕೇಯ ಸಿಂಗ್ ಬುಧವಾರ ರಾಜೀನಾಮೆ ನೀಡಿದ್ದಾರೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಕೂಡ ತಮ್ಮ ಶಿಫಾರಸನ್ನು ರಾಜ್ಯಪಾಲ ಫಗು ಚೌಹಾಣ್ ಅವರಿಗೆ ಕಳುಹಿಸಿದ್ದು, ತಡಮಾಡದೆ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಕಂದಾಯ ಮತ್ತು ಭೂ ಸುಧಾರಣಾ ಸಚಿವ ಅಲೋಕ್ ಕುಮಾರ್ ಮೆಹ್ತಾ ಅವರಿಗೆ ಕಬ್ಬು ಕೈಗಾರಿಕೆ ಇಲಾಖೆಯ ಹೆಚ್ಚುವರಿ ಹೊಣೆ ನೀಡಲಾಗಿದೆ.
ವಾಸ್ತವವಾಗಿ 2014ರ ಅಪಹರಣ ಪ್ರಕರಣದಲ್ಲಿ ಕಾರ್ತಿಕೇಯ ಸಿಂಗ್ ವಿರುದ್ಧ ನ್ಯಾಯಾಲಯ ವಾರೆಂಟ್ ಹೊರಡಿಸಿತ್ತು. ಅಂದಿನಿಂದ ಅವರು ವಿವಾದದಲ್ಲಿ ಸಿಲುಕಿದ್ದರು. ಇದರ ಬೆನ್ನಲ್ಲೇ ಈಗ ರಾಜೀನಾಮೆ ನೀಡಿದ್ದಾರೆ. ಆಗಸ್ಟ್ 16 ರಂದು ನ್ಯಾಯಾಲಯದಲ್ಲಿ ಆರ್‌ಜೆಡಿ ಶಾಸಕ ಕಾರ್ತಿಕೇಯ ಸಿಂಗ್ಗೆ ಶರಣಾಗುವಂತೆ ವಾರೆಂಟ್ ಹೊರಡಿಸಲಾಗಿತ್ತು. ಆದರೆ ಅವರು ನ್ಯಾಯಾಲಯಕ್ಕೆ ಶರಣಾಗಿರಲಿಲ್ಲ. ಬದಲಿಗೆ ಅದೇ ದಿನ ಕಾನೂನು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಕಾರ್ತಿಕೇಯ ಸಿಂಗ್ ಅವರಿಗೆ ಮೊದಲು ಕಾನೂನು ಸಚಿವರನ್ನಾಗಿ ಮಾಡಲಾಗಿತ್ತು. ಕ್ರಿಮಿನಲ್ ಒಬ್ಬರಿಗೆ ಕಾನೂನು ಸಚಿವ ಸ್ಥಾನ ನೀಡಲಾಗಿದೆ ಎಂದು ಬಿಜೆಪಿ ನಿರಂತರವಾಗಿ ಟೀಕೆ ಮಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ನಿತೀಶ್ ಕುಮಾರ್ ಅವರು ಬುಧವಾರ (ಆ.31) ಬೆಳಗ್ಗೆ ಕಾರ್ತಿಕೇಯ ಸಿಂಗ್ ಅವರಿಂದ ಕಾನೂನು ಸಚಿವಾಲಯವನ್ನು ಹಿಂಪಡೆದು ಅವರನ್ನು ಕಬ್ಬು ಉದ್ಯಮ ಸಚಿವರನ್ನಾಗಿ ಮಾಡಿದರು, ಆದರೆ ಸಂಜೆಯಾಗುವಷ್ಟರಲ್ಲಿ ವೇಳೆಗೆ ಕಾರ್ತಿಕೇಯ ಸಿಂಗ್ ರಾಜೀನಾಮೆ ನೀಡಿದ್ದಾರೆ.
PublicNext
01/09/2022 03:06 pm