ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಾರಕಿಹೊಳಿ ಫ್ಯಾಮಿಲಿಗೆ ಬ್ರೇಕ್ ಹಾಕಲು ಬಿಜೆಪಿ ಮಾಸ್ಟರ್ ಪ್ಲ್ಯಾನ್ ?

ವಿಧಾನಸಭೆ ಚುನಾವಣೆ ವಿಶೇಷ : ಕೇಶವ ನಾಡಕರ್ಣಿ

ರಾಜ್ಯ ವಿಧಾನಸಭೆ ಚುನಾವಣೆ ಕೆಲವೇ ತಿಂಗಳು ಇರುವಾಗ ಬೆಳಗಾವಿ ಜಿಲ್ಲೆ ರಾಜಕೀಯ ದಿನೆ ದಿನೆ ಹೊಸ ಹೊಸ ತಿರುವು ಪಡೆಯುತ್ತಿದೆ. ಜಾರಕಿಹೊಳಿ ಕುಟುಂಬ ರಾಜಕಾರಣಕ್ಕೆ ಬ್ರೆಕ್ ಹಾಕಲು ಬಿಜೆಪಿ ಘಾಟನುಘಟಿ ನಾಯಕರು ಒಗ್ಗಟ್ಟಾಗುತ್ತಿದ್ದಾರೆ.

ಇದಕ್ಕೆ ಸಾಕ್ಷಿ ಈಚೆಗೆ ಯಮಕನಮರ್ಡಿಯಲ್ಲಿ ನಡೆದ ಮಾರುತಿ ಅಷ್ಟಗಿ ಅಭಿನಂದನಾ ಸಮಾರಂಭ.

ಈ ಜಾರಕಿಹೊಳಿ ಸಹೋದರರ ರಾಜಕೀಯ ಪಟ್ಟು ಮೆಚ್ಚಲೇಬೇಕು. ರಾಜ್ಯದಲ್ಲಿ ಸರಕಾರ ಯಾವುದೇ ಇರಲಿ ಜಾರಕಿಹೊಳಿ ಕುಟುಂಬದ ಒಂದು ಕುಡಿ ಅಧಿಕಾರದಲ್ಲಿ ಇರಬೇಕು.

ಜಾರಕಿಹೊಳಿ ಸಹೊದರರ ಪೈಕಿ ಸತೀಶ್ ಯಮಕನಮರ್ಡಿ ಕಾಂಗ್ರೆಸ್ ಶಾಸಕ, ರಮೇಶ್ ಗೋಕಾಕ್ ಬಿಜೆಪಿ ಶಾಸಕ, ಭಾಲಚಂದ್ರ ಕೆಎಂಎಫ್ ಅಧ್ಯಕ್ಷ, ಬಿಜೆಪಿಗೇ ಮುಖಭಂಗ ಮಾಡಿ ಎಂಎಲ್ಸಿ ಆಗಿರುವ ಲಖನ್ ಹಾಗೂ ಅಧಿಕೃತವಾಗಿ ರಾಜಕೀಯ ಪ್ರವೇಶ ಮಾಡುತ್ತಿರುವ ಭೀಮಶಿ ಜಾರಕಿಹೊಳಿ ಉದಾಹರಣೆ.

ಸಹೋದರರಲ್ಲಿ ಎಷ್ಟೇ ಕೌಟುಂಬಿಕ ಭಿನ್ನಾಭಿಪ್ರಾಯಗಳಿದ್ದರೂ ರಾಜಕೀಯ ವಿಷಯ ಬಂದಾಗ ಎಲ್ಲರೂ ರಹಸ್ಯವಾಗಿ ಒಂದಾಗುತ್ತಾರೆ ಎಂಬ ಮಾತು ಬೆಳಗಾವಿ ಜಿಲ್ಲಾ ರಾಜಕೀಯದಲ್ಲಿ ಜನಜನಿತ ಹಾಗೂ ಅದು ಸತ್ಯವೂ ಹೌದು.

ಎಲ್ಲರೂ ಒಂದೊಂದು ಪಕ್ಷ ಪ್ರತಿನಿಧಿಸುವವರು ಅಥವಾ ಪ್ರತ್ಯಕ್ಷ, ಪರೋಕ್ಷವಾಗಿ ಚುನಾವಣೆಯಲ್ಲಿ ಒಬ್ಬರಿಗೊಬ್ಬರ ಸಹಾಯಕ್ಕೆ ನಿಲ್ಲುವವರು.

ರಾಜಕೀಯ ಚಾಣಕ್ಷರನ್ನು ಕಟ್ಟಿ ಹಾಕದಿದ್ದರೆ ತಮಗೆ ಉಳಿಗಾಲವಿಲ್ಲ ಎಂದು ಭಾವಿಸಿದಂತಿರುವ ಸಚಿವ ಉಮೇಶ ಕತ್ತಿ, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿಯ ಯಮಕನಮರ್ಡಿ ಕ್ಷೇತ್ರದಿಂದಲೇ ತಮ್ಮ ಅಭಿಯಾನ ಅರಂಭಿಸಿದ್ದಾರೆ ಎನ್ನಬಹುದು.

ಯಮಕನಮರ್ಡಿಯಲ್ಲಿ ಸತೀಶ್ ಜಾರಕಿಹೊಳಿ ಕಟ್ಟಿಹಾಕಿದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ನ್ನು ದುರ್ಬಲಗೊಳಿಸಿದಂತಾಗುತ್ತೆ ಎಂಬುದು ಬಿಜೆಪಿಗರ ಲೆಕ್ಕಾಚಾರ.

ಇದೇ ಕಾರಣಕ್ಕೆ ಬಿಜೆಪಿ ಪರಾಭವ ಅಭ್ಯರ್ಥಿ ಹಾಗೂ ಕರಕುಶಲ ಅಭಿವೃದ್ದಿ ನಿಮಗಮದ ಅಧ್ಯಕ್ಷ ಮಾರುತಿ ಅಷ್ಟಗಿ ಅಭಿನಂದನಾ ಸಮಾರಂಭ ನೆಪದಲ್ಲಿ ಯಮಕನಮರ್ಡಿಯಲ್ಲಿ ಬೃಹತ್ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಅಲ್ಲಿ ಬಿಜೆಪಿ ಶಾಸಕ ಹಾಗೂ ಮಾಜಿ ಮಂತ್ರಿಯಾಗಿದ್ದ ರಮೇಶ್ ಜಾರಕಿಹೊಳಿ ಫೋಟೊ ಬ್ಯಾನರ್ ಗಳಲ್ಲಿ ನಾಪತ್ತೆ. ಇದು ಜಾರಕಿಹೊಳಿ ಕುಟುಂಬಕ್ಕೆ ನೀಡಿದ ಸ್ಪಷ್ಟ ಸಂದೇಶ ಎಂಬ ಮಾತು ಕೇಳಿಬರುತ್ತಿದೆ.

ಅದ್ರೆ ಯಮಕನಮರ್ಡಿ ಕಾರ್ಯಕ್ರಮದಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದ್ದ ಬೆಳಗಾವಿ ಜಿಲ್ಲಾ ಬಿಜೆಪಿಯೇ ಒಡೆದ ಮನೆಯಂತಾಗಿದೆ. ಮಾರುತಿ ಅಷ್ಟಗಿ ಅಭಿನಂದನಾ ಕಾರ್ಯಕ್ರಮದ ಮರುದಿನವೇ ಇನ್ನೊಬ್ಬ ಟಿಕೆಟ್ ಆಕಾಂಕ್ಷಿ ಗುತ್ತಿಗೆದಾರ ಬಸವರಾಜ್ ಉಂದ್ರಿ ತಮ್ಮ ಹುಟ್ಟು ಹಬ್ಬದ ನೆಪದಲ್ಲಿ ಜನರನ್ನು ಸೇರಿಸಿ ತಮ್ಮ ಬಲ ಪ್ರದರ್ಶಿಸಿದ್ದಾರೆ.

ಮೃದು ಸ್ವಭಾವದ ಶಾಸಕ ಸತೀಶ್ ಜಾರಕಿಹೊಳಿ ಯಮಕನಮರ್ಡಿ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಅನೇಕ ಸಮಾಜಿಕ ಕಾರ್ಯಗಳನ್ನು ಮಾಡಿ ಮತದಾರರಿಗೆ ಹತ್ತಿರವಾಗಿದ್ದಾರೆ. ಆದರೂ ಕಳೆದ ಬಾರಿ ಕಡಿಮೆ ಅಂತರದಲ್ಲಿ ಗೆದ್ದಿರುವುದನ್ನು ನೋಡಿದರೆ ಈ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಸತೀಶ್ ಸಾಕಷ್ಟು ಕಷ್ಟ ಪಡಲೇ ಬೇಕಾಗಿದೆ.

ಟಿಕೆಟ್ ಗಾಗಿ ಈಗಲೇ ಕಿತ್ತಾಡಿಕೊಳ್ಳುತ್ತಿರುವ ಬಿಜೆಪಿ ಅಭ್ಯರ್ಥಿಗಳು ತಮ್ಮ ಒಳಜಗಳ ಬಿಟ್ಟು ಒಗ್ಗಟ್ಟಾಗಿ ಹೋರಾಡಿದರೆ ಮಾತ್ರ ಕಾಂಗ್ರೆಸ್ಸಿಗೆ ಟಕ್ಕರ್ ಕೊಡಬಹುದು. ಇಲ್ಲವಾದರೆ, ಉಮೇಶ್ ಕತ್ತಿ ಹಾಗೂ ಲಕ್ಷ್ಮಣ ಸವದಿ ಮುಖಭಂಗ ಎದುರಿಸಬೇಕಾಗುತ್ತೆ.

Edited By :
PublicNext

PublicNext

25/08/2022 10:42 am

Cinque Terre

31.07 K

Cinque Terre

3

ಸಂಬಂಧಿತ ಸುದ್ದಿ