ನವದೆಹಲಿ: ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಉಪ ಮುಖ್ಯಮಂತ್ರಿ, ದೆಹಲಿಯ ಶಿಕ್ಷಣ ಸಚಿವರು ಕೂಡ ಆಗಿರುವ ಮನೀಶ್ ಸಿಸೋಡಿಯಾ ಅವರ ನಿವಾಸ ಸೇರಿದಂತೆ 21 ಸ್ಥಳಗಳಲ್ಲಿ ಸಿಬಿಐ ದಾಳಿ ನಡೆಸುತ್ತಿದೆ.
ಈ ಸಂಬಂಧ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಮನೀಶ್ ಸಿಸೋಡಿಯಾ ಅವರು, "ಸಿಬಿಐ ಅಧಿಕಾರಿಗಳು ಇಲ್ಲಿ ನನ್ನ ಮನೆಯಲ್ಲಿದ್ದಾರೆ. ನಾನು ತನಿಖಾ ಸಂಸ್ಥೆಯೊಂದಿಗೆ ಸಹಕರಿಸುತ್ತೇನೆ. ಅವರಿಗೆ ನನ್ನ ವಿರುದ್ಧ ಏನೂ ಸಾಕ್ಷಿಗಳು ಸಿಗುವುದಿಲ್ಲ ಎಂಬ ನಂಬಿಕೆ ನನಗಿದೆ. ದೇಶದಲ್ಲಿ ಒಳ್ಳೆಯ ಕೆಲಸ ಮಾಡುವವರಿಗೆ ಈ ರೀತಿ ತೊಂದರೆಯಾಗುತ್ತಲೇ ಇರುತ್ತದೆ. ನಾವು ಪ್ರಾಮಾಣಿಕರು, ಲಕ್ಷಾಂತರ ಮಕ್ಕಳ ಭವಿಷ್ಯವನ್ನು ನಿರ್ಮಿಸುತ್ತೇವೆ. ದುರದೃಷ್ಟಕರ ಸಂಗತಿ ಎಂದರೆ ಈ ದೇಶದಲ್ಲಿ ಒಳ್ಳೆಯ ಕೆಲಸ ಮಾಡುವವರಿಗೆ ಈ ರೀತಿ ತೊಂದರೆಯಾಗುತ್ತದೆ. ಅದಕ್ಕಾಗಿಯೇ ನಮ್ಮ ದೇಶ ಇನ್ನೂ ನಂಬರ್ 1 ಆಗಿಲ್ಲ ಎಂದು ಹೇಳಿದ್ದಾರೆ.
ಇನ್ನು ಸಿಬಿಐ ದಾಳಿ ಸ್ವಾಗತ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ. "ದೆಹಲಿಯ ಶಿಕ್ಷಣ ಮಾದರಿಯನ್ನು ಹೊಗಳಿದ ದಿನ... ನ್ಯೂಯಾರ್ಕ್ ಟೈಮ್ಸ್‌ನ ಮೊದಲ ಪುಟದಲ್ಲಿ ಸಿಸೋಡಿಯಾ ಅವರ ಚಿತ್ರವನ್ನು ಮುದ್ರಿಸಲಾಯಿತು. ಅದೇ ದಿನ ಕೇಂದ್ರ ಸರ್ಕಾರವು ಸಿಬಿಐ ಅನ್ನು ಅವರ ಮನೆಗೆ ಕಳುಹಿಸಿತು" ಎಂದು ಕೇಜ್ರಿವಾಲ್ ವ್ಯಂಗ್ಯವಾಡಿದ್ದಾರೆ.
PublicNext
19/08/2022 10:41 am