ಕನಕಪುರ : ಸಾಹಿತಿ ಬರಗೂರು ರಾಮಚಂದ್ರಪ್ಪ ನಮ್ಮ ಸಮಾಜಕ್ಕೆ ಅವಮಾನ ಮಾಡಿದ್ದು ಕೂಡಲೇ ಕ್ಷಮೆಯಾಚಿಸಬೇಕು ಎಂದು ಗಂಗಾಮತಸ್ಥ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಪಿ.ಪ್ರಕಾಶ್ ಒತ್ತಾಯಿಸಿದರು.
ನಗರದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ್ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ ನಂತರ ಮಾತನಾಡಿದರು.
ಬರಗೂರು ರಾಮಚಂದ್ರಪ್ಪ ರವರ ಕಾದಂಬರಿ ಭರತನಗರಿಯಲ್ಲಿ ನಮ್ಮ ಕುಲದೇವತೆ ಗಂಗಾದೇವಿಯ ಬಗ್ಗೆ ಅವಹೇಳನಾಕಾರಿಯಾಗಿ ಹಾದರ ಎಂದು ಬರೆದಿದ್ದು ನಮ್ಮ ಜನಾಂಗಕ್ಕೆ ಮಾಡಿದ ದ್ರೋಹವಾಗಿದೆ ಆದ್ದರಿಂದ ಈ ಕೂಡಲೇ ಕಾದಂಬರಿ ಮಾರಾಟ ನಿಲ್ಲಿಸಿ ಹಾಗೂ ಮುದ್ರಣವನ್ನು ಸಹ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಹಾಗೂ ಅದೇ ಕಾದಂಬರಿಯಲ್ಲಿ ನಮ್ಮ ರಾಷ್ಟ್ರಗೀತೆಯ ಬಗ್ಗೆಯೂ ಅವಮಾನ ಮಾಡಿದ್ದು ಅವರ ಮೇಲೆ ಸರ್ಕಾರ ಕ್ರಿಮಿನಲ್ ಕೇಸ್ ದಾಖಲಿಸಿ ಬಂಧಿಸಬೇಕು ಎಂದು ಹೇಳಿದರು. ಗಂಗಾ ಮಾತೆ ಶ್ರೇಷ್ಠವಾಗಿದ್ದು ಯಾವುದೇ ಶುಭ ಸಮಾರಂಭಗಳಿಗೆ ಹಾಗೂ ಅಲ್ಲಿ ಮಿಂದೆದ್ದರೆ ಎಲ್ಲಾ ಪಾಪಗಳು ಕರಗಿ ಹೋಗಲಿವೆ ಎನ್ನುವ ಪ್ರತೀತಿ ಇದ್ದು ನಮ್ಮ ದೇವರಿಗೆ ಅವಮಾನ ಮಾಡಿರುವ ಬರಗೂರು ರಾಮಚಂದ್ರಪ್ಪರವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಕನಕಪುರ ಠಾಣೆಯಲ್ಲಿ ಬರಗೂರು ರಾಮಚಂದ್ರಪ್ಪ ವಿರುದ್ದ ದೂರು ನೀಡಲಾಗುವುದು ಎಂದು ಹೇಳಿದರು. ಗಂಗಾ ಮತಸ್ಥ ಸಂಘದ ಮುಖಂಡರಾದ ಚಾಮರಾಜು, ಜಯಸಿಂಹ, ಜಗನ್ನಾಥ್, ಸಿದ್ದಪ್ಪ, ರಘುವೀರ್, ಶ್ರೀನಿವಾಸ, ಕೃಷ್ಣಪ್ಪ, ಮಹಾಲಿಂಗು ವಕೀಲ ಯೋಗೇಶ್ ಇತರರು ಇದ್ದರು.
PublicNext
18/08/2022 10:19 pm