ಕೊಡಗು: ನಮ್ಗೆ ಮೊಟ್ಟೆ ಎಸೆಯೋಕೆ ಬರಲ್ವಾ, ನಾವು ಶುರು ಮಾಡಿದ್ರೆ ಸಿಎಂ ಎಲ್ಲೂ ಓಡಾಡೋಕೆ ಆಗಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗರಂ ಆಗಿದೆ. ಇಂದು ಕೊಡಗಿನಲ್ಲಿ ತ್ರಿವರ್ಣ ಧ್ವಜ ಹಿಡಿದು ಸಾವರ್ಕರ್ ಪರ ಘೋಷಣೆ ಕೂಗುತ್ತಾ ಸಿದ್ದರಾಮಯ್ಯರತ್ತ ಮೊಟ್ಟೆ ಎಸೆದು ‘ಸಿದ್ದರಾಮಯ್ಯ ಟಿಪ್ಪುವಿನ ಶಿಷ್ಯ’ ಎಂದು ಆಕ್ರೋಶ ಹೊರಹಾಕಿದರು. ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ, ಇದು ಹೇಡಿಗಳು ಮಾಡುವ ಕೆಲಸ ಎಂದು ಹರಿಹಾಯ್ದರು.
ಇವರಿಗೆ ಸರ್ಕಾರ ನಡೆಸಲು ಬರಲ್ಲ, ವಿಷಯ ಡೈವರ್ಟ್ ಮಾಡಲು ಹೊರಟ್ಟಿದ್ದಾರೆ ಎಂದಿದ್ದಾರೆ. ಟಿಪ್ಪು ಜಯಂತಿ ಮಾಡಿ ಎಷ್ಟು ವರ್ಷವಾಯಿತು? ಅದಾದ ನಂತರ ಸಾಕಷ್ಟು ಬಾರಿ ಜಿಲ್ಲೆಗೆ ಬಂದಿದ್ದೆ. ಜಿಲ್ಲಾಧಿಕಾರಿ ತಡೆಗೋಡೆ ಕಳಪೆ ಮಾಡಿಸಿದ್ದಾರೆ. ಅದು ಗೊತ್ತಾಗುತ್ತೆ ಎಂದು ಈ ರೀತಿ ಮಾಡಿದ್ದಾರೆ. ಬಿಜೆಪಿಯವರು ಹೇಡಿಗಳು ಎಂದು ಕಿಡಿಕಾರಿದರು.
ಇಡೀ ರಾಜ್ಯದಲ್ಲಿ ಜನರಿಗೆ ಮಳೆಹಾನಿ ಪರಿಹಾರ ಸಿಕ್ಕಿಲ್ಲ. ಕೊಡಗು ಜಿಲ್ಲೆಯಲ್ಲೂ ನೀಡಿಲ್ಲ. ನಮ್ಮ ಸರ್ಕಾರ ಜಿಲ್ಲೆಯ ಅಭಿವೃದ್ಧಿಗೆ ಹಣ ನೀಡಿತ್ತು. ಈಗಿನ ಸರ್ಕಾರ ಹಣ ನೀಡಿಲ್ಲ. ಈ ಬಾರಿ ಎರಡೂ ಕ್ಷೇತ್ರ ಕಾಂಗ್ರೆಸ್ ಪಾಲಾಗುತ್ತದೆ. ಆದ್ದರಿಂದ ಬಿಜೆಪಿ ಅವರು ಹತಾಶರಾಗಿದ್ದಾರೆ.
ಯಡಿಯೂರಪ್ಪ ಅವರನ್ನು ಸಮಾಧಾನ ಪಡಿಸಲು ಸಂಸದೀಯ ಮಂಡಳಿಗೆ ಸೇರಿಸಿದ್ದಾರೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಹೀಗೆ ಮಾಡಿದ್ದಾರೆ ಎಂದರು.
PublicNext
18/08/2022 07:39 pm