ಬೆಂಗಳೂರು: ತಮ್ಮದೇ ಸರ್ಕಾರದ ವಿರುದ್ಧ ಸಚಿವ ಮಾಧುಸ್ವಾಮಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋವೊಂದು ವೈರಲ್ ಆಗಿದ್ದು, ರಾಜ್ಯ ಬಿಜೆಪಿಯಲ್ಲಿ ತಲ್ಲಣ ಮೂಡಿಸಿದೆ.
ಚನ್ನಪಟ್ಟಣದಿಂದ ಸಮಾಜ ಸೇವಕ ಭಾಸ್ಕರ್ ಎಂಬುವರು ವಿಎಸ್ಎಸ್ಎನ್ ಬ್ಯಾಂಕ್ನಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಮಾಧುಸ್ವಾಮಿ ಅಸಹಾಯಕತೆ ತೋರಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಈ ಆಡಿಯೋ ಅಸಲಿಯೋ-ನಕಲಿಯೋ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.
ಆಡಿಯೋದಲ್ಲಿ ಏನಿದೆ?
ಭಾಸ್ಕರ್: ನಮಸ್ತೆ ಸರ್, ನಾನು ಚನ್ನಪಟ್ಟಣದಿಂದ ಸಮಾಜ ಸೇವಕ ಭಾಸ್ಕರ್ ಅಂತ. ವಿಎಸ್ಎಸ್ಎನ್ ಬ್ಯಾಂಕ್ನಲ್ಲಿ 50 ಸಾವಿರ ರೂಪಾಯಿ ಸಾಲ ಪಡೆದಿದ್ದಾರೆ ರೈತರು. ಆ ಹಣ ಕಟ್ಟಬೇಕಾದರೆ ರಿನೀವಲ್ಗೆ ಅಂತ 1,300 ರೂಪಾಯಿಯನ್ನ ಬ್ಯಾಂಕ್ ಸಿಬ್ಬಂದಿಗಳು ತಗೊಂಡು ಅವರೇ ಬಡ್ಡಿಗೆ ಅಂತ ಹಣ ಇಟ್ಕೊತ್ತಿದ್ದಾರೆ.
ಮಾಧುಸ್ವಾಮಿಯದ್ದು ಎನ್ನಲಾದ ಧ್ವನಿ: ಏನಪ್ಪ ಮಾಡ್ಲಿ… ಇದೆಲ್ಲ ನನಗೆ ಗೊತ್ತು, ಬಡ್ಡಿ ಹೊಡ್ಕೊಂಡು ತಿಂತಾರೆ ಅಂತ ಸನ್ಮಾನ್ಯ ಸೋಮಶೇಖರ್ ಅವರ ಗಮನಕ್ಕೂ ತಂದಿದ್ದೇನೆ. ಅವರೇನು ಕ್ರಮ ಜರುಗಿಸ್ತಾ ಇಲ್ವಲ್ಲಾ… ಏನ್ ಮಾಡೋದು?
ಭಾಸ್ಕರ್: ರೈತರನ್ನ ಬ್ಯಾಂಕ್ನವರು ಮಂಗನಂತೆ ಮಾಡಿಬಿಟ್ಟಿದ್ದಾರೆ ನೋಡಿ ಸರ್
ಮಾಧುಸ್ವಾಮಿಯದ್ದು ಎನ್ನಲಾದ ಧ್ವನಿ: ನಾನೇ ಕಟ್ಟಿದ್ದೀನಿ ಮಾರಾಯಾ, ರೈತರಲ್ಲ ನನ್ನ ಹತ್ತಿರ ಕೂಡ ತಗೊಂಡವ್ರೇ
ಭಾಸ್ಕರ್: ನೋಡಿ ಸರ್ ಇದೆಲ್ಲಾ ನೋಡೋಕೆ ಸರಿ ಕಾಣ್ಸಲ್ಲ.
ಮಾಧುಸ್ವಾಮಿಯದ್ದು ಎನ್ನಲಾದ ಧ್ವನಿ: ಸರ್ಕಾರ ನಡೀತಾ ಇಲ್ಲ ಇಲ್ಲಿ, ಮ್ಯಾನೇಜ್ಮೆಂಟ್ ಮಾಡ್ತಿದ್ದೀವಿ ಅಷ್ಟೆ. ತಳ್ಳಿದ್ರೆ ಸಾಕು ಇನ್ನು 8 ತಿಂಗಳು ಅಂತ ತಳ್ತಾ ಇದ್ದೀವಿ…
PublicNext
13/08/2022 07:36 pm