ಪಟ್ನಾ: ಎರಡನೆಯ ಬಾರಿಗೆ ಬಿಜೆಪಿ ಜತೆಗಿನ ಮೈತ್ರಿಯನ್ನು ಮುರಿದುಕೊಂಡು ಎರಡನೆಯ ಬಾರಿಗೆ ಆರ್‌ಜೆಡಿ ಜತೆಗೆ ಕೈಜೋಡಿಸಿ ಪುನಃ ಸಿಎಂ ಆಗಿದ್ದಾರೆ ನಿತೀಶ್ ಕುಮಾರ್. ಅವರ ಮುಂದಿನ ಟಾರ್ಗೆಟ್ ಇರುವುದು 2024ರ ಚುನಾವಣೆಯಲ್ಲಿ ಪ್ರಧಾನಿ ಸ್ಥಾನಕ್ಕೆ ಎಂದೇ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಪ್ರಧಾನಿ ಸ್ಥಾನಕ್ಕೆ ನಿತೀಶ್ ಕುಮಾರ್ ಕಣ್ಣಿಟ್ಟಿದ್ದಾರೆ ಎನ್ನಲಾಗುತ್ತಿದೆ. ಈ ಗಾಳಿಮಾತನ್ನು ಅವರು ಅಲ್ಲಗಳೆದಿದ್ದರೂ, ಅವರಿಗೆ ಇಂಥದ್ದೊಂದು ಆಸೆ ಇದೆ ಎನ್ನುವುದು ರಾಜಕೀಯ ಲೆಕ್ಕಾಚಾರ. ಆದರೆ ನಿಜಕ್ಕೂ ಇವರು ಪ್ರಧಾನಿಯಾಗುತ್ತಾರಾ? ಬಿಹಾರದ ಮುಂದಿನ ರಾಜಕೀಯ ಭವಿಷ್ಯವೇನು? ಸಿಎಂ ಆಗಿ ಬಿಹಾರದಲ್ಲಿ ಮೈತ್ರಿ ಸರ್ಕಾರ ಹೇಗೆ ಕೆಲಸ ನಿರ್ವಹಿಸುತ್ತದೆ ಇತ್ಯಾದಿ ಪ್ರಶ್ನೆಗಳಿಗೆ ಇದೀಗ, ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಕೆಲವೊಂದು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಇವರು ಈ ಮೊದಲು ನಿತೀಶ್ಕುಮಾರ್ ನೇತೃತ್ವ ಜೆಡಿಯುನಲ್ಲಿ ಕಾರ್ಯ ನಿರ್ವಹಿಸಿದ್ದರು. ಇಂದಷ್ಟೇ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಹೊಸ ಮೈತ್ರಿಕೂಟ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದು 2024ರ ಸಾರ್ವತ್ರಿಕ ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ. ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಬಿಹಾರದ ಏಕೈಕ ದೊಡ್ಡ ಪಕ್ಷದ ನಾಯಕರಾಗಿದ್ದಾರೆ. ಆದ್ದರಿಂದ ಬಿಹಾರದಲ್ಲಿ ಹೊಸ ಸರ್ಕಾರ ರಚನೆಯನ್ನು ನಡೆಸುವಲ್ಲಿ ಇವರು ದೊಡ್ಡ ಪಾತ್ರವನ್ನು ವಹಿಸುವ ಸಾಧ್ಯತೆಯಿದೆ.
ಸದ್ಯ ರಚನೆಯಾಗಿರುವ ನಿತೀಶ್ ಕುಮಾರ್ ನೇತೃತ್ವದ ಮೈತ್ರಿಕೂಟದ ಬಿಹಾರ ಸರ್ಕಾರ ಮುಂದಿನ ದಿನಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾದರೆ ಅದು ಅಸಾಧಾರಣ ಶಕ್ತಿಯಾಗಿ ಹೊರಹೊಮ್ಮಲಿದೆ. ಒಂದು ವೇಳೆ ಈ ಸರ್ಕಾರ ಉತ್ತಮವಾಗಿ ಕೆಲಸ ಮಾಡದಿದ್ದರೆ ಮಾತ್ರ ಅವರಿಗೇ ಈ ಸರ್ಕಾರ ಮುಳುವಾಗಲಿದೆ ಎಂದಿದ್ದಾರೆ.
ನಿತೀಶ್ ಕುಮಾರ್ ಅವರು ಈ ಮೊದಲಿನಂತೆಯೇ ಜನಪ್ರಿಯತೆ ಉಳಿಸಿಕೊಂಡಿದ್ದಾರೆಯೇ ಎಂದು ಕೇಳಿದ ಪ್ರಶ್ನೆಗೆ ಪ್ರಶಾಂತ್ ಕಿಶೋರ್, 'ಅದಕ್ಕೂ ಇದಕ್ಕೆ ತುಂಬಾ ದೊಡ್ಡ ವ್ಯತ್ಯಾಸವಿದೆ.
2010ರಲ್ಲಿ ಅವರು 117 ಶಾಸಕರನ್ನು ಹೊಂದಿದ್ದರು, 2015ರಲ್ಲಿ ಇದು 72ಕ್ಕೆ ಇಳಿಯಿತು, ಈಗ ಇರುವ ಸಂಖ್ಯೆ 43 ಮಾತ್ರ. ಅವರ ಜನಪ್ರಿಯತೆಯ ಬಗ್ಗೆ ಈ ಸಂಖ್ಯೆಯೇ ತೋರಿಸುತ್ತದೆ ಎಂದಿದ್ದಾರೆ.
ನಿತೀಶ್ ಕುಮಾರ್ ಅವರು ಪ್ರಧಾನಿ ಅಭ್ಯರ್ಥಿ ಎನ್ನಲಾಗುತ್ತಿದೆ.
ಬಿಜೆಪಿ ಜತೆಗಿನ ಮೈತ್ರಿ ತೊರೆದ ಮೇಲೆ ರಾಷ್ಟ್ರ ರಾಜಕಾರಣದಲ್ಲಿ ಏನಾದರೂ ಪರಿಣಾಮ ಬೀರುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಶಾಂತ್ ಕಿಶೋರ್, 'ಬಿಹಾರ ದೊಡ್ಡ ರಾಜ್ಯವಾಗಿದೆ ನಿಜ. ಆದರೆ ಈ ಬದಲಾವಣೆ ರಾಷ್ಟ್ರಮಟ್ಟದ ರಾಜಕೀಯದ ಮೇಲೆ ತಕ್ಷಣದ ಪರಿಣಾಮ ಬೀರುವ ಸಾಧ್ಯತೆಯಿಲ್ಲ ಎಂದರು.
ನಿತೀಶ್ ಅವರು ತಮ್ಮ ಹೊಸ ಮೈತ್ರಿಕೂಟದ ಪಾಲುದಾರ ತೇಜಸ್ವಿ ಯಾದವ್ ವಿರುದ್ಧದ ಭ್ರಷ್ಟಾಚಾರ ಆರೋಪಗಳನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆಗೆ ಕಿಶೋರ್, 'ನಿತೀಶ್ ಬಹಳ ಯೋಚಿಸಿದ ನಂತರ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಇಂಥ ನಿರ್ಧಾರ ಮಾಡುವ ಮುನ್ನ, ಕೆಲವೊಮ್ಮೆ ನೈತಿಕತೆಗಳನ್ನು ಬದಿಗೆ ಸರಿಸಬೇಕಾಗುತ್ತದೆ.
PublicNext
11/08/2022 10:25 am