ಬೆಂಗಳೂರು: ಎಐಸಿಸಿ ಅಧ್ಯಕ್ಷೆ, ತಾಯಿ ಸೋನಿಯಾ ಗಾಂಧಿ ಅವರ ಪ್ರೀತಿ ಮೇಲೆ ನನಗೆ ನಂಬಿಕೆಯಿದೆ. ನನ್ನ ಹಣೆಯಲ್ಲಿ ಬರೆದಿದ್ದರೆ ಸಿಎಂ ಆಗೋದನ್ನು ತಪ್ಪಿಸೋಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, 'ರಾಜಕೀಯ ಎನ್ನುವುದು ನೀರಲ್ಲ, ಏನು ಬೇಕಾದರೂ ಆಗಬಹುದು. ನಾನು ಯಾವುದೇ ತಪ್ಪು ಮಾಡಿಲ್ಲ. ರಾಜಕೀಯವಾಗಿ ನನ್ನ ಮೇಲೆ ಭಯ ಇರೋದಕ್ಕೆ ತೊಂದ್ರೆ ಕೊಡುತ್ತಿದ್ದಾರೆ. ನಾನು ಪಕ್ಷಕ್ಕಾಗಿ ಚಪ್ಪಡಿ ಆಗೋಕೂ ರೆಡಿ. ಆದ್ರೆ ಸನ್ಯಾಸಿ ಆಗಲ್ಲ. ಪಕ್ಷಕ್ಕಾಗಿ ರಕ್ತ, ಬೆವರು ಕೊಟ್ಟಿದ್ದೇನೆ. 2 ವರ್ಷದಿಂದ ನಿದ್ರೆ ಮಾಡಿಲ್ಲ. ಏಕೆಂದರೆ ವ್ಯಕ್ತಿಗಿಂತ ಪಕ್ಷ ಮುಖ್ಯ. ನಮಗೊಂದು ಅವಕಾಶ ಮಾಡಿಕೊಟ್ಟರೆ, ನಾವೂ ಜನಸೇವೆ ಮಾಡುತ್ತೇವೆ' ಎಂದು ಹೇಳಿದ್ದಾರೆ.
ನಾನು ಜೈಲಲ್ಲಿದ್ದಾಗ ತಾಯಿ ಸೋನಿಯಾ ವಿಚಾರಿಸಿದ್ರಲ್ಲ, ಇನ್ನೇನು ಬೇಕು? ತಿಹಾರ್ ಜೈಲಿಗೆ ಬಂದು ಒಂದೂವರೆ ಗಂಟೆ ಮಾತಾಡಿಸಿದರು. ಸೋನಿಯಾ ಗಾಂಧಿಯ ತಾಯಿ ಪ್ರೀತಿ ಮೇಲೆ ನಂಬಿಕೆ ಇದೆ. ನಾನು ಸಿಎಂ ಆಗೋದು ನನ್ನ ಹಣೆಯಲ್ಲಿ ಬರೆದಿದ್ದರೆ ತಪ್ಪಿಸೋಕೆ ಯಾರಿಂದಲೂ ಸಾಧ್ಯವಿಲ್ಲ. ಆದರೆ ನನ್ನ ಆಪ್ತರಿಗೆ ಕೊಡುತ್ತಿರುವ ಕಿರುಕುಳ ಯಾವ ವೈರಿಗೂ ಬೇಡ ಎಂದು ಭಾವುಕರಾದರು.
ಸಿದ್ದರಾಮೋತ್ಸವದಿಂದ ನನಗ್ಯಾಕೆ ಶಾಕ್ ಆಗಬೇಕು? ಜನಸಾಗರವೇ ಕಾಂಗ್ರೆಸ್ ಪಕ್ಷದ ಶಕ್ತಿ, ಸಿದ್ದರಾಮೋತ್ಸವ ಸಿದ್ದರಾಮಯ್ಯ, ಪಕ್ಷ ಎರಡಕ್ಕೂ ಶಕ್ತಿ ತುಂಬಿದೆ. ನಾನು ಕುರ್ಚಿ ಬಗ್ಗೆ ಯೋಚನೆ ಮಾಡುತ್ತಿಲ್ಲ. ಕಾರ್ಯಕರ್ತರು ವಿಧಾನಸೌಧ 3ನೇ ಮಹಡಿ ಮೇಲೆ ಓಡಾಡಬೇಕು. ಒಕ್ಕಲಿಗ ಸಮುದಾಯದ ಬಳಿ ಸಹಕಾರ ಕೇಳಿದ್ರೆ ತಪ್ಪೇನು? ನಮ್ಮದು ಕಲೆಕ್ಟೀವ್ ಲೀಡರ್‌ಶಿಪ್ ಒಟ್ಟಾಗಿ ಚುನಾವಣೆ ಎದುರಿಸ್ತೀವಿ ಎಂದು ಹೇಳಿದ್ದಾರೆ.
PublicNext
05/08/2022 02:15 pm