ವರದಿ- ಗೀತಾಂಜಲಿ
ಬೆಂಗಳೂರು: ಬಿಜೆಪಿ ಪಕ್ಷ ವಿಕೃತ, ವಿಲಕ್ಷಣ ಪಕ್ಷ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಬಿಜೆಪಿ ವಿರುದ್ಧ ತೀವ್ರ ಟೀಕಾಪ್ರಹಾರ ನಡೆಸಿದ್ರು.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವ್ರು, ನಾಗಮಂಗಲದ ಜೆಡಿಎಸ್ ಸಮಾವೇಶವನ್ನು ನಮ್ಮ ತಂದೆಯವರು ಬೆಂಗಳೂರಿನ ನಿವಾಸದಿಂದಲೇ ನೇರ ವೀಕ್ಷಣೆ ಮಾಡಿದ ಕ್ಷಣದಲ್ಲಿ ನಾನು, ನನ್ನ ಸಹೋದರ, ಅಲ್ಲಿದ್ದವರೆಲ್ಲರೂ ಭಾವೋದ್ವೇಗಕ್ಕೆ ಒಳಗಾಗಿ ಕಣ್ಣೀರಿಟ್ಟಿದ್ದನ್ನು ಬಿಜೆಪಿ ವಿಕೃತವಾಗಿ ತಿರುಚಿದೆ. ಇನ್ನೊಬ್ಬರ ಕಣ್ಣೀರಿನ ಬಗ್ಗೆ ಇದೆಂಥಾ ವಿಕಾರ? ಇದೇನಾ ʼಸಂಘʼ ಕಲಿಸಿದ ಸಂಸ್ಕಾರ? ಛೇ!! ಎಂದು ಕಿಡಿಕಾರಿದ್ದಾರೆ.
ಬಿಜೆಪಿ ವಿಲಕ್ಷಣ, ವಿಕೃತ ಪಕ್ಷ. ಭೀಭತ್ಸ ಬಿಜೆಪಿ. ಅಪರೇಷನ್ ಕಮಲವನ್ನೇ ನೆಚ್ಚಿಕೊಂಡ ವಿನಾಶಕಾರಿ ಪಕ್ಷ.
ಕಗ್ಗೊಲೆಗಳೇ ಅದರ ಕಸುಬು, ಬಡಯುವಕರ ರಕ್ತವೇ ಅದರ ಪಾಲಿನ ʼಅಧಿಕಾರಾಮೃತʼ. ಅದೆಷ್ಟು ಹೆತ್ತ ಕರುಳುಗಳು ಕಣ್ಣೀರಿಡುತ್ತಿವೆ.
ಅದಕ್ಕೆ ಉತ್ತರ ಕೊಡುವ ನೈತಿಕತೆ ಇದೆಯಾ? ಆಮೇಲೆ ನನ್ನ ಕಣ್ಣೀರ ಬಗ್ಗೆ ಮಾತನಾಡಿ ಎಂದು ಟಾಂಗ್ ನೀಡಿದ್ದಾರೆ. ನಾನು ಇನ್ನೊಬ್ಬರ ಕಣ್ಣೀರಿನ ಬಗ್ಗೆ, ಭಾವೋದ್ವೇಗದ ಕುರಿತು ಲಘುವಾಗಿ ಮಾತನಾಡಲಾರೆ. ಆದರೂ ವಿಕೃತ ಬಿಜೆಪಿಗೆ ನೆನಪು ಮಾಡಿಕೊಡಲು ಬಯಸುತ್ತೇನೆ. ಅಧಿಕಾರ ಹೋಗುತ್ತದೆ ಎಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ʼನಲ್ಲಿ ವಿದಾಯ ಭಾಷಣ ಮಾಡುತ್ತಾ ವೇದಿಕೆಯ ಮೇಲೆಯೇ ಕಣ್ಣೀರಧಾರೆ ಹರಿಸಿದವರು ಯಾವ ಪಕ್ಷದವರು? ಎಂದು ಬಿಜೆಪಿ ವಿರುದ್ದ ಚಾಟಿ ಬೀಸಿದ್ದಾರೆ.
PublicNext
02/08/2022 08:13 pm