ದಾವಣಗೆರೆ: ಮಾಜಿ ಸಿಎಂ ಸಿದ್ದರಾಮಯ್ಯರ 75ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಆಯೋಜಿಸಿರುವ ಅಮೃತ ಮಹೋತ್ಸವಕ್ಕೆ ಆಗಸ್ಟ್ 3ರ ನಾಳೆ ಮಧ್ಯಾಹ್ನ 1ಗಂಟೆಗೆ ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಆಗಮಿಸಲಿದ್ದಾರೆ ಎಂದು ಮಾಜಿ ಸಚಿವ ಹೆಚ್.ಎಂ.ರೇವಣ್ಣ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ - ಹರಿಹರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುವ ಈ ಮಹೋತ್ಸವದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್, ರಣದೀಪ್ ಸರ್ಜಿವಾಲಾ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಬಿ. ಕೆ. ಹರಿಪ್ರಸಾದ್, ಡಾ. ಜಿ. ಪರಮೇಶ್ವರ್ ಸೇರಿದಂತೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ನಾಯಕರು ಆಗಮಿಸಲಿದ್ದಾರೆ ಎಂದರು.
ಬೆಳಿಗ್ಗೆ 10ಗಂಟೆಗೆ ನಾದಬ್ರಹ್ಮ ಹಂಸಲೇಖ, ಸಾಧುಕೋಕಿಲಾ ಹಾಗೂ ಸಂಗೀತಾ ಕಟ್ಟಿ ಅವರ ತಂಡದಿಂದ ಹಾಡುಗಾರಿಕೆ ನಡೆಯಲಿದೆ. 11.30ರಿಂದ ಕಾಂಗ್ರೆಸ್ ಹಿರಿಯ ನಾಯಕರ ಭಾಷಣ ಆರಂಭವಾಗಲಿದೆ. ಮಧ್ಯಾಹ್ನ 1ಗಂಟೆಗೆ ರಾಹುಲ್ ಗಾಂಧಿ ಆಗಮಿಸಲಿದ್ದು, ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ.
ವೇದಿಕೆಯ ಮುಂಭಾಗದಲ್ಲಿ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಅವರು ಸೇರಿದಂತೆ ಕೇಂದ್ರ ಮುಖಂಡರಿಗೆ ಆಸೀನ ವ್ಯವಸ್ಥೆ ಮಾಡಲಾಗಿದೆ. ಎಡಭಾಗದಲ್ಲಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ಜನಪ್ರತಿನಿಧಿಗಳು, ರಾಜ್ಯ ನಾಯಕರಿಗೆ ಡಯಾಸ್ ಮಾಡಲಾಗಿದೆ. ಬಲಭಾಗದಲ್ಲಿ ಕಾಂಗ್ರೆಸ್ ಹಿರಿಯ ನಾಯಕರು, ಸ್ವಾಗತ ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳಿಗೆ ಡಯಾಸ್ ನಿರ್ಮಾಣ ಮಾಡಲಾಗಿದೆ ಎಂದು ವಿವರಿಸಿದರು.
PublicNext
02/08/2022 06:01 pm