ಬೆಂಗಳೂರು: ದುಷ್ಕರ್ಮಿಗಳಿಂದ ಕೊಲೆಯಾದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ಕುಟುಂಬಕ್ಕೆ ಸಚಿವ ಡಾ.ಅಶ್ವತ್ಥನಾರಾಯಣ ವೈಯಕ್ತಿಕವಾಗಿ 10 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಇದಕ್ಕೂ ಮುನ್ನ ಪ್ರವೀಣ್ ಕುಟುಂಬಕ್ಕೆ ಬಿಜೆಪಿಯಿಂದ 25 ಲಕ್ಷ ರೂ. ಪರಿಹಾರ ನೀಡುವ ಭರವಸೆ ನೀಡಲಾಗಿದೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜವಿರೋಧಿ ಶಕ್ತಿಗಳ ಅಮಾನುಷ ಕ್ರೌರ್ಯಕ್ಕೆ ಬಲಿಯಾದ ಬಿಜೆಪಿ ಕಾರ್ಯಕರ್ತ ಮತ್ತು ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರ ಕುಟುಂಬಕ್ಕೆ ವೈಯಕ್ತಿಕ ವಾಗಿ 10 ಲಕ್ಷ ರೂ. ನೀಡುತ್ತೇನೆ. ಪ್ರವೀಣ್ ಅವರ ಬಲಿದಾನಕ್ಕೆ ನಾವು ಬೆಲೆ ಕಟ್ಟಲು ಸಾಧ್ಯವಿಲ್ಲ. ನೀಡುತ್ತಿರುವ ಹಣವನ್ನು ನೆರವು ಎಂದು ಹೇಳಲು ಇಷ್ಟ ಪಡುವುದಿಲ್ಲ. ಇದು ನನ್ನ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಪ್ರವೀಣ್ ಹಂತಕರು ಎಲ್ಲೇ ಇದ್ದರೂ ಕಠಿಣ ಕ್ರಮ ಜರುಗಿಸಲಾಗುವುದು. ಪಕ್ಷದ ಕಾರ್ಯಕರ್ತರ ಆಕ್ರೋಶ ನನಗೆ ಅರ್ಥವಾಗುತ್ತದೆ. ಅಪರಾಧಿಗಳ ಹೆಡೆಮುರಿ ಕಟ್ಟುವ ಶಕ್ತಿ ಬಿಜೆಪಿ ಸರ್ಕಾರಕ್ಕಿದೆ ಎಂದರು.
PublicNext
28/07/2022 07:16 pm