ಬೆಂಗಳೂರು: ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮುಖಂಡ ಪ್ರವೀಣ್ ಹತ್ಯೆ ವಿಚಾರಕ್ಕೆ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಅಷ್ಟೇ ಅಲ್ಲದೆ ಯುವ ಮುಖಂಡರಿಂದ ರಾಜೀನಾಮೆ ಪರ್ವ ಶುರುವಾಗಿದೆ.
ಬಿಜೆಪಿಯ ಶೃಂಗೇರಿ ಮಂಡಲ ಯುವ ಮೋರ್ಚಾದ ಅಧ್ಯಕ್ಷ ಸ್ಥಾನಕ್ಕೆ ಸುನೀಲ್ ಸಂಪೆಕೊಳಲು ಎಂಬಾತ ರಾಜೀನಾಮೆ ನೀಡಿದ್ದು, ನಾವು ಹಿಂದುಗಳ ಪರವೇ ಹೊರತು, ನಕಲಿ ಹಿಂದೂಗಳ ಪರ ಅಲ್ಲ ಎಂದು ತಿಳಿಸಿದ್ದಾರೆ. ಇನ್ನು ಬಾಗಲಕೋಟೆ ಬಿಜೆಪಿ ಜಿಲ್ಲಾ ಯುವ ಮೋರ್ಚಾದ ಕಾರ್ಯಕರ್ತರೆಲ್ಲರೂ ಸಾಮಾಹಿಕವಾಗಿ ರಾಜೀನಾಮೆ ನೀಡಿದ್ದಾರೆ.
ಯುವ ಮೋರ್ಚಾದಿಂದ ಸಭೆ ನಡೆಸಿದ ಬಳಿಕ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಆನಂದ ಇಂಗಳಗಾಂವಿ ಹಾಗೂ ಪ್ರಧಾನ ಕಾರ್ಯದರ್ಶಿ ಭುವನೇಶ್ವರ ಪೂಜಾರ್ ಹೇಳಿದ್ದಾರೆ.
ಮೂಡಿಗೆರೆ, ಕೊಪ್ಪ, ಸೇರಿದಂತೆ ಹಲವೆಡೆ ಯುವ ಮೋರ್ಚಾದ ಅಧ್ಯಕ್ಷ, ಕಾರ್ಯದರ್ಶಿ ಸ್ಥಾನಕ್ಕೆ ಯುವ ಮುಖಂಡರು ರಾಜೀನಾಮೆ ಸಲ್ಲಿಸಿ ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಇನ್ನು ಬೆಂಗಳೂರಿನ ರಾಜಾರಾಜೇಶ್ವರಿನಗರ ವಿಧಾನ ಸಭಾ ಕ್ಷೇತ್ರದ ಸಾಮಾಜಿಕ ಜಾಲಾತಾಣದ ಸಂಚಾಲಕ ಶ್ರೀನಿವಾಸ್ ಗೌಡ ಎಂಬಾತನೂ ತಾನೂ ಇಂದಿನಿಂದ ಎಲ್ಲಾ ಸ್ಥಾನಕ್ಕೂ ರಾಜೀನಾಮೆ ನೀಡುತ್ತಿದ್ದೇನೆ ಎಂದು ಸಾಮಾಜಿಕ ಜಾಲಾತಾಣದಲ್ಲಿ ಘೋಷಣೆ ಮಾಡಿಕೊಂಡಿದ್ದಾರೆ.
PublicNext
27/07/2022 04:20 pm