ಕಾರವಾರ: ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿಯಾಗಿರುವ ಮಾರ್ಗರೇಟ್ ಆಳ್ವ ಅವರು ತಮ್ಮ ಫೋನ್ ಟ್ಯಾಪ್ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಟ್ವಿಟ್ಟರ್ ನಲ್ಲಿ ಸೋಮವಾರ ಸರ್ಕಾರದ ವಿರುದ್ಧ ಗರಂ ಆದ ಆಳ್ವ, ತಮ್ಮ ಫೋನ್ ಸರಿಪಡಿಸಿದರೆ ಬಿಜೆಪಿ, ಟಿಎಂಸಿ ಅಥವಾ ಬಿಜೆಡಿಯ ಸಂಸದರಿಗೆ ಕರೆ ಮಾಡುವುದಿಲ್ಲ ಎಂದಿದ್ದರು. ತಮ್ಮ ಸಿಮ್ ಕಾರ್ಡ್ ನ ಎಂಟಿಎನ್ ಎಲ್ (ಮಹಾನಗರ್ ಟೆಲಿಫೋನ್ ನಿಗಮ ನಿಯಮಿತ) ಕೆವೈಸಿಯನ್ನು ಅಮಾನತು ಮಾಡಲಾಗಿದೆ ಮತ್ತು 24 ಗಂಟೆಗಳ ಒಳಗೆ ಬ್ಲಾಕ್ ಮಾಡಲಾಗುತ್ತದೆ ಎಂಬ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.
ದೊಡ್ಡಣ್ಣನಿಗೆ ಭಯ ಹಾಗಾಗಿ ರಾಜಕಾರಣಿಗಳ ಫೋನ್ ಟ್ಯಾಪ್ ಮಾಡುತ್ತಿದ್ದಾನೆ. ಆದರೆ ದೊಡ್ಡಣ್ಣನ ಈ ಭಯ ಪ್ರಜಾಪ್ರಭುತ್ವವನ್ನು ಕೊಲ್ಲುತ್ತದೆ ಎಂದು ಬರೆದುಕೊಂಡಿದ್ದಾರೆ. ನಾನು ಬಿಜೆಪಿಯಲ್ಲಿ ಇರುವ ನನ್ನ ಸ್ನೇಹಿತರು, ಆಪ್ತರಲ್ಲಿ ಫೋನ್ ಮೂಲಕ ಮಾತನಾಡಿದೆ. ಅದಾದ ಬಳಿಕ ನನ್ನ ಫೋನ್ ಕರೆಗಳೆಲ್ಲಾ ಡೈವರ್ಟ್ ಆಗುತ್ತಿದೆ. ಯಾವುದೇ ಕರೆ ಮಾಡಲು, ಸ್ವೀಕರಿಸಲು ಆಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಇದಲ್ಲದೇ ನನ್ನ ಫೋನ್ ರೀ-ಕನೆಕ್ಟ್ ಮಾಡಿಕೊಡಿ. ಖಂಡಿತವಾಗಿಯೂ ಬಿಜೆಪಿ, ಟಿಎಂಸಿ ಮತ್ತು ಬಿಜೆಡಿಯ ಯಾವುದೇ ಸಂಸದರು, ಶಾಸಕರಿಗೆ ಕರೆ ಮಾಡುವುದಿಲ್ಲ ಎಂದು ಭರವಸೆ ನೀಡುತ್ತೇನೆ ಎಂದು ವ್ಯಂಗ್ಯವಾಡಿದ್ದಾರೆ.
PublicNext
26/07/2022 07:46 pm