ಬೆಳಗಾವಿ: ಆಗಸ್ಟ್ 15ರಂದು ಅಮೃತ ಮಹೋತ್ಸವದ ಅಂಗವಾಗಿ ಕಾಂಗ್ರೆಸ್ ಪಕ್ಷದ ಮುಂದಾಳತ್ವದಲ್ಲಿ ಬೆಂಗಳೂರಿನ ಸಂಗೋಳಿ ರಾಯಣ್ಣ ವೃತ್ತದಿಂದ ನಾಷನಲ್ ಕಾಲೇಜ್ ಗ್ರೌಂಡ್ ವರೆಗೂ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾರತಕ್ಕೆ ಸ್ವಾತಂತ್ರ ಬಂದು 75ವರ್ಷ ತುಂಬಿದೆ.ಇದು ಕಾಂಗ್ರೆಸ್ ಪಕ್ಷದ ಕೊಡುಗೆಯಾಗಿದೆ. ಹೀಗಾಗಿ ನಮ್ಮ ಹಿರಿಯ ನಾಯಕರು, ಐತಿಹಾಸಿಕ ಸ್ಥಳಗಳಿಗೆ ಭೇಟಿ ಮಾಡಬೇಕು ಅಂತಾ ತೀರ್ಮಾನ ಮಾಡಿದ್ದಾರೆ.ಹೀಗಾಗಿ ನಾನು ರಾಷ್ಟ್ರೀಯ ಧ್ವಜ ತಯಾರಿಸುವ ಸ್ಥಳಕ್ಕೆ ಭೇಟಿ ಮಾಡಿದ್ದೇನೆ.ಕಿತ್ತೂರು ರಾಣಿ ಚನ್ನಮ್ಮನ ಕೋಟೆಗೆ ಬಂದಿದ್ದೇನೆ. ಗಾಂಧಿಯವರು ಬೆಳಗಾವಿಗೆ ಭೇಟಿ ನೀಡಿದ್ದರು.ಆ ಸ್ಥಳಕ್ಕೂ 15ನೇ ತಾರೀಖಿನ ಒಳಗಾಗಿ ಭೇಟಿ ಕೊಡುತ್ತೇನೆ ಎಂದರು.
75ನೇ ವರ್ಷದ ಸ್ವಾತಂತ್ರ್ಯ ದಿನದಂದು ಕನಿಷ್ಠ 75 ಸಾವಿರದಿಂದ 1 ಲಕ್ಷದವರೆಗೆ ಜನರು ರಾಷ್ಟ್ರೀಯ ಧ್ವಜವನ್ನು ಹಿಡಿದು ಬೆಂಗಳೂರಿನ ಸಂಗೋಳಿ ರಾಯಣ್ಣ ವೃತ್ತದಿಂದ ನಾಷನಲ್ ಕಾಲೇಜ್ ಗ್ರೌಂಡ್ ವರೆಗೂ ಸ್ವಾತಂತ್ರ್ಯ ನಡಿಗೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷ ಅಷ್ಟೇ ಭಾಗಿಯಾಗಲ್ಲ. ಕಾಂಗ್ರೆಸ್ ಮುಂದಾಳತ್ವ ತೆಗೆದುಕೊಂಡಿದೆ. ಈ ಕಾರ್ಯಕ್ರಮದಲ್ಲಿ ಯಾರ ಬೇಕಾದರೂ ಭಾಗಿಯಾಗಬಹುದು.ಪ್ರತಿಕ್ಷೇತ್ರದಿಂದ ಕನಿಷ್ಠ 500 ಜನರಾದರೂ ಬರಬೇಕು ಎಂದು ಕರೆಕೊಟ್ಟಿದ್ದೇನೆ.
ಕಿತ್ತೂರು ಕಾಂಗ್ರೆಸ್ ನಲ್ಲಿ ಭಿನ್ನಮತ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾವು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ. ಅದಕ್ಕೆ ವೈಸ್ ಪ್ರೆಸಿಡೆಂಟ್ ಅವರನ್ನು ನೇಮಕ ಮಾಡಿದ್ದೇನೆ.ಯಾವುದೇ ಸಮಸ್ಯೆ ಇಲ್ಲದೇ ಒಟ್ಟಿಗೆ ಕರೆದುಕೊಂಡು ಹೋಗುತ್ತೇನೆ ಎಂದರು. ಇದೇ ವೇಳೆ ಕಿತ್ತೂರು ಪಟ್ಟಣದಲ್ಲಿ ಕಿತ್ತೂರು ರಾಣಿ ಚನ್ನಮ್ಮ,ಸಂಗೋಳಿ ರಾಯಣ್ಣ, ಅಮಟೂರ ಬಾಳಪ್ಪ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ಇದಕ್ಕೂ ಮೊದಲು ಕಿತ್ತೂರು ಪಟ್ಟಣಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಆಗಮ ಮುನ್ನವೇ ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಫೋಟವಾಗಿದ್ದು ಮಾಜಿ ಸಚಿವ ಡಿ.ಬಿ.ಇನಾಂದಾರ್ ಬೆಂಬಲಿಗರು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾಜಿ ಜಿಪಂ ಸದಸ್ಯ ಬಾಬಾಸಾಹೇಬ್ ಪಾಟೀಲ್ ವಿರುದ್ದ ಆಕ್ರೋಶ ಹೊರಹಾಕಿದರು. ಕಿತ್ತೂರು ಕಾಂಗ್ರೆಸ್ ಪಕ್ಷದಲ್ಲಿ ವ್ಯಕ್ತಿ ನಿಷ್ಠೆಗಿಂತ ಪಕ್ಷ ನಿಷ್ಠೆ ಮುಖ್ಯವಾಗುತ್ತಿದೆ. ಪಕ್ಷ ವಿರೋಧಿ ಚಟುವಟಿಕೆ ನೀಡುವವರಿಗೆ ಪಕ್ಷದಲ್ಲಿ ಸ್ಥಾನಮಾನ ನೀಡಲಾಗಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಬಾಬಾಸಾಹೇಬ್ ಪಾಟೀಲ್ ಪಕ್ಷೇತರರಾಗಿ ಸ್ಪರ್ಧಿಸಿ ಕಾಂಗ್ರೆಸ್ ಸೋಲಿಗೆ ಕಾರಣರಾಗಿದ್ರು.
PublicNext
23/07/2022 09:51 am