ಲಕ್ನೋ: ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರದ ಸಂಪುಟದಲ್ಲಿ ಸಂಚಲ ಉಂಟಾಗಿದೆ. ಕ್ಯಾಬಿನೆಟ್‌ನ ಇಬ್ಬರು ಸಚಿವರು ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಅಸಮಾಧಾನ ಹೊರ ಹಾಕಿದ್ದು, ರಾಜೀನಾಮೆ ಪತ್ರ ಕೂಡ ಕೊಟ್ಟಿದ್ದಾರೆ.
ಹೌದು. ಉತ್ತರ ಪ್ರದೇಶದ ಜಲಶಕ್ತಿ ಇಲಾಖೆಯ ರಾಜ್ಯ ಸಚಿವ ದಿನೇಶ್ ಖಟಿಕ್ ಅವರು ಆದಿತ್ಯನಾಥ್ ನೇತೃತ್ವದ ರಾಜ್ಯ ಸರಕಾರಕ್ಕೆ ಬುಧವಾರ ರಾಜೀನಾಮೆ ನೀಡಿದ್ದಾರೆ. ಜೊತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ರಾಜೀನಾಮೆ ಪತ್ರದೊಂದಿಗೆ ಇನ್ನೊಂದು ಪತ್ರವನ್ನು ಕಳುಹಿಸಿಕೊಟ್ಟಿದ್ದಾರೆ. ಇನ್ನೊಂದೆಡೆ ಲೋಕೋಪಯೋಗಿ ಇಲಾಖೆ ಸಚಿವ ಜಿತಿನ್ ಪ್ರಸಾದ್ ಕೂಡ ಸರ್ಕಾರದ ವಿರುದ್ಧ ಸಿಟ್ಟಿಗೆದ್ದಿದ್ದಾರೆ. 'ದಲಿತನಾದ ನನ್ನ ಮಾತನ್ನು ಅಧಿಕಾರಿಗಳು ಕೇಳುವುದೇ ಇಲ್ಲ. ಇಲ್ಲಿಯವರೆಗೆ ನಾನು ಹೇಳಿದ ಯಾವ ಕೆಲಸವೂ ಇಲಾಖೆಯಲ್ಲಿ ಆಗಿಲ್ಲ. ದಲಿತ ಸಮಾಜದ ರಾಜ್ಯ ಸಚಿವನಾಗಿದ್ದರೂ ನನ್ನ ಆದೇಶದ ಮೇಲೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಇಲಾಖೆ ವತಿಯಿಂದ ಯಾವೆಲ್ಲಾ ಕಾರ್ಯಕ್ರಮಗಳು, ಕಾಮಗಾರಿಗಳು ನಡೆಯುತ್ತಿವೆ ಎನ್ನುವ ಮಾಹಿತಿಯನ್ನು ನನಗೆ ನೀಡಬೇಕಲ್ಲವೆ? ಇಂಥ ಅಧಿಕಾರಿಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ?' ಎಂದು ದಿನೇಶ್ ತಮ್ಮ ಪತ್ರದಲ್ಲಿ ಬರೆದ್ದಾರೆ.
ಕಾಂಗ್ರೆಸ್ ನಲ್ಲಿ ಗಾಂಧಿ ಕುಟುಂಬಕ್ಕೆ ಆಪ್ತರು ಹಾಗೂ ಬಲಿಷ್ಠರೆನಿಸಿಕೊಂಡಿದ್ದ ಜಿತಿನ್ ಪ್ರಸಾದ್ ಅವರಿಗೆ ಯೋಗಿ ಸರಕಾರದಲ್ಲಿ ಬೃಹತ್ ಲೋಕೋಪಯೋಗಿ ಇಲಾಖೆಯನ್ನು ನೀಡಲಾಗಿದೆ. ತಮ್ಮ ಇಲಾಖೆಯಲ್ಲಿ ನಡೆದ ವರ್ಗಾವಣೆ ಅವಧಿಯಲ್ಲಿ ವರ್ಗಾವಣೆಯಲ್ಲಿ ಹಲವು ಪ್ರಮುಖ ಅಕ್ರಮಗಳು ಬಯಲಿಗೆ ಬಂದಿವೆ. ಇದಾದ ಬಳಿಕ ಸಿಎಂ ಸಮಿತಿ ರಚಿಸಿ ತನಿಖೆಗೆ ಒಪ್ಪಿಸಿದ್ದಾರೆ. ವರದಿಯ ನಂತರ, ಅವರ ಒಎಸ್‌ಡಿ (OSD) ಮೇಲೆ ಮೊದಲ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಅನಿಲ್ ಪಾಂಡೆ ಅವರನ್ನು ದೆಹಲಿಯಿಂದ ಲಕ್ನೋಗೆ ಇಲಾಖೆಯ ಒಎಸ್‌ಡಿಯಾಗಿ ಜಿತಿನ್ ಕರೆತಂದಿದ್ದರು. ಆದರೆ, ಭ್ರಷ್ಟಾಚಾರದ ಆರೋಪದ ಮೇಲೆ ಇವರನ್ನು ಸರ್ಕಾರ ತೆಗೆದುಹಾಕಿದೆ. ಇದು ಜಿತಿನ್ ಪ್ರಸಾದ್ ಅವರ ಸಿಟ್ಟಿಗೆ ಕಾರಣವಾಗಿದೆ. ಮಂಗಳವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರನ್ನು ಭೇಟಿ ಮಾಡಿದ್ದಾರೆ. ಬುಧವಾರ ದೆಹಲಿ ತೆರಳಿ ಈ ವಿಚಾರವನ್ನು ಕೇಂದ್ರದ ಗಮನಕ್ಕೂ ತರಲಿದ್ದಾರೆ ಎನ್ನಲಾಗಿದೆ.
ಜಲಶಕ್ತಿ ರಾಜ್ಯ ಸಚಿವ ದಿನೇಶ್ ಖಟಿಕ್ ತಮ್ಮ ಇಲಾಖೆಯ ಹಿರಿಯ ಸಚಿವ ಸ್ವತಂತ್ರ ದೇವ್ ಸಿಂಗ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲಾಖೆಯ ಅಧಿಕಾರಿಗಳಾಗಲಿ, ಅವರದೇ ಇಲಾಖೆಯ ಹಿರಿಯ ಸಚಿವರಾಗಲಿ ದಿನೇಶ್ ಖಾಟಿಕ್ ಮಾತನ್ನು ಕೇಳುತ್ತಿಲ್ಲ ಎಂಬ ಆರೋಪವಿದೆ. ಸರಕಾರ 100 ದಿನ ಪೂರೈಸಿದ್ದರೂ ಇವರಿಗೆ ಯಾವುದೇ ಕೆಲಸ ನೀಡಿಲ್ಲ. ಮಂಗಳವಾರ ಸಚಿವ ಸಂಪುಟ ಸಭೆಯಲ್ಲಿ ಖಟಿಕ್ ಭಾಗವಹಿಸಿದ್ದರು. ಇದಾದ ಬಳಿಕ ಭ್ರದತಾ ತಂಡ ಹಾಗೂ ಸರ್ಕಾರಿ ಕಾರನ್ನು ಬಿಟ್ಟು ಮೀರತ್‌ನ ಗಂಗಾನಗರದಲ್ಲಿರುವ ಅವರ ಮನೆಗೆ ತೆರಳಿದ್ದರು. ಇದಕ್ಕೂ ಮುನ್ನ ಸಂಘಟನಾ ಸಚಿವ ಸುನಿಲ್ ಬನ್ಸಾಲ್ ಅವರನ್ನು ಭೇಟಿ ಮಾಡಿ ಅಸಮಾಧಾನ ವ್ಯಕ್ತಪಡಿಸಿದರು. ಇದರಿಂದ ಕೋಪಗೊಂಡ ಸಚಿವರು 5 ಮಂದಿಗೆ ಪತ್ರವನ್ನೂ ಕಳುಹಿಸಿದ್ದಾರೆ. ಖಟಿಕ್ ತಮ್ಮ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ತಮ್ಮ ಇಲಾಖೆಯ ಕ್ಯಾಬಿನೆಟ್ ಸಚಿವರ ಜತೆ ದಿನೇಶ್ ಖಟಿಕ್ ಹೊಂದಾಣಿಕೆ ಮಾಡಿಕೊಳ್ಳುತ್ತಿರಲಿಲ್ಲ. ಸುಮಾರು 10 ದಿನಗಳ ಹಿಂದೆ ದಿನೇಶ್ ಖಟಿಕ್ ಬಹಳ ಕೋಪಗೊಂಡಿದ್ದರು. ನಂತರ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ದಿನೇಶ್ ಖಟಿಕ್ ಮನೆಗೆ ತೆರಳಿ ಸಮಾಧಾನ ಮಾಡಿದ್ದರು.
PublicNext
20/07/2022 02:53 pm