ದಾವಣಗೆರೆ: ನಾನು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಅಥವಾ ಬೇಡವೋ ಎಂಬ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಚುನಾವಣೆಗೆ ಇನ್ನು ಎಂಟು ತಿಂಗಳಿದೆ, ನೋಡೋಣ. ಚುನಾವಣೆ ಸಮೀಪಿಸಲಿ, ಆಗ ಹೇಳುತ್ತೇನೆ ಎಂದು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹೇಳಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ಇನ್ನೂ ಟೈಂ ಇದೆ. ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಬೇಕು. ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕು. ಸಿದ್ದರಾಮಯ್ಯ ಸಿಎಂ ಆಗಿದ್ದ ಕಾಲಾವಧಿಯಲ್ಲಿ ಆದ ಅಭಿವೃದ್ಧಿ ಕೆಲಸಗಳು ಮತ್ತೆ ಆಗಬೇಕು ಎಂಬ ಬಗ್ಗೆಯಷ್ಟೇ ನಮ್ಮ ಯೋಚನೆ. ಬಸವರಾಜ್ ಬೊಮ್ಮಾಯಿ ಅವರು ಉತ್ತರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿ. ಇದಕ್ಕೆ ತಲೆಕೆಡಿಸಿಕೊಳ್ಳಲ್ಲ. ನಮ್ಮ ಪಕ್ಷದಿಂದ ಸೂಕ್ತ ಅಭ್ಯರ್ಥಿ ಕಣಕ್ಕೆ ಇಳಿಯಲಿದ್ದಾರೆ ಎಂದರು.
ಇನ್ನು ಪ್ರಭಾ ಮಲ್ಲಿಕಾರ್ಜುನ್ ಅವರು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ವಿಚಾರ ನಮ್ಮ ಮುಂದಿಲ್ಲ. ಇದೆಲ್ಲಾ ಮಾಧ್ಯಮ ಸೃಷ್ಟಿ. ಮನೆಯಲ್ಲಿದ್ದವರೂ ಹೊರಬರುವಂತೆ ನೀವು ಮಾಡುತ್ತೀರಾ. ಮಹಾನಗರ ಪಾಲಿಕೆ ಉಪಚುನಾವಣೆಯಲ್ಲಿ ಮನೆಯವರೆಲ್ಲಾ ಓಡಾಡಿದೆವು. ಅವರೂ ಪ್ರಚಾರಕ್ಕೆ ಬಂದರು. ಆರೋಗ್ಯ ಶಿಬಿರಗಳನ್ನು ಹೆಚ್ಚು ನಡೆಸುತ್ತಿದ್ದಾರೆ. ಪ್ರಭಾ ವೈದ್ಯರಾದ ಕಾರಣ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಎಸ್. ಎಸ್. ಹೆಲ್ತ್ ಕೇರ್ ಸೆಂಟರ್ ನಡಿ ಡಯಾಲಿಸಿಸ್, ಹೃದಯ ತಪಾಸಣೆ ಸೇರಿದಂತೆ ಆರೋಗ್ಯ ಕುರಿತಾದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.
PublicNext
18/07/2022 06:16 pm