ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿಎಂ ಗಮನಕ್ಕೆ ತಂದೇ ಸರ್ಕಾರಿ ಕಚೇರಿಗಳಲ್ಲಿ ಫೋಟೋ, ವಿಡಿಯೋ ನಿರ್ಬಂಧ ಆದೇಶ; ಆಡಿಯೋ ಬಹಿರಂಗ

ಬೆಂಗಳೂರು; ಸಾರ್ವಜನಿಕರು ಅನುಮತಿ ಇಲ್ಲದೆ ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳ ಕಚೇರಿಗಳಲ್ಲಿ ಫೋಟೊ ತೆಗೆಯುವುದು ಮತ್ತು ವಿಡಿಯೊ ಚಿತ್ರೀಕರಿಸುವುದನ್ನು ನಿಷೇಧಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಶುಕ್ರವಾರ ಹೊರಡಿಸಿದ್ದ ಆದೇಶವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನದಲ್ಲಿತ್ತು!

ಅಲ್ಲದೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಅವರ ಮನವಿ ಮೇರೆಗೇ ಆದೇಶ ಹೊರಡಿಸಿದ್ದರು. ಕರ್ನಾಟಕ ರಾಷ್ಟ್ರಸಮಿತಿಯ ಕಾರ್ಯಕರ್ತರು ಜಿಲ್ಲಾ, ತಾಲೂಕು ಕಚೇರಿ, ಪೊಲೀಸ್ ಠಾಣೆ, ಜಿಲ್ಲಾ, ತಾಲೂಕು ಆಸ್ಪತ್ರೆಗಳಿಗೆ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ವಿಡಿಯೋ ಲೈವ್ ಮಾಡುತ್ತಿರುವುದನ್ನೂ ಆಲಮಟ್ಟಿಯ ಕಾರ್ಯಕ್ರಮವೊಂದರಲ್ಲಿ ಮಾಡಿರುವ ಭಾಷಣದಲ್ಲಿ ಪ್ರಸ್ತಾಪಿಸಿರುವ ಷಡಕ್ಷರಿ ಅವರು ಮುಖ್ಯಮಂತ್ರಿಯವರೊಂದಿಗೆ ಇದನ್ನು ಪ್ರಸ್ತಾಪಿಸಿದ್ದರು. ಹಾಗೆಯೇ ಅವರ ಗಮನಕ್ಕೆ ತಂದೇ ಆದೇಶ ಹೊರಡಿಸಲಾಗಿದೆ ಎಂಬುದು ಇದೀಗ ಬಹಿರಂಗವಾಗಿದೆ.

ಸರ್ಕಾರಿ ಕಚೇರಿಗಳಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ ತೆಗೆಯದಂತೆ ನಿರ್ಬಂಧಿಸಿ ಹೊರಡಿಸಿದ್ದ ಆದೇಶವು ತಮ್ಮ ಗಮನಕ್ಕೇ ಬಂದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿಕೆ ನೀಡಿದ ಕೆಲವೇ ಕೆಲವೇ ಗಂಟೆಗಳಲ್ಲಿ ಷಡಕ್ಷರಿ ಅವರು ಭಾಷಣದಲ್ಲಿ ಹೇಳಿರುವ ಮಾತಿನ ತುಣುಕುಗಳೂ ಮುನ್ನೆಲೆಗೆ ಬಂದಿವೆ.

ಆಲಮಟ್ಟಿಯಲ್ಲಿ ನಡೆದಿದ್ದ ಸ್ವಚ್ಛತಾ ಕಾರ್ಯಕ್ರಮದ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಅವರು ಮುಖ್ಯಮಂತ್ರಿಯೊಂದಿಗೆ ಕಾರಿನಲ್ಲಿ ಹೋಗುವಾಗ ಈ ವಿಚಾರವನ್ನು ಅವರ ಗಮನಕ್ಕೆ ತಂದು ಆದೇಶ ಮಾಡಿಸಲಾಗಿದೆ ಎಂದು ನೌಕರರ ಕಾರ್ಯಕ್ರಮ ಭಾಷಣದಲ್ಲಿ ಹೆಮ್ಮೆಯಿಂದಲೇ ಬಹಿರಂಗಪಡಿಸಿದ್ದಾರೆ. ಈ ಆಡಿಯೋ ತುಣುಕು ‘ದಿ ಫೈಲ್’ -ವಾರ್ತಾಭಾರತಿ ಲಭ್ಯವಾಗಿದೆ.

ಆಡಿಯೋದಲ್ಲೇನಿದೆ?

ಈಗೊಂದು ಆರ್ಡರ್ ಮಾಡಿಸ್ದೆ. ಜಸ್ಟ್ ವಾಟ್ಸಾಪ್ನಲ್ಲಿ ಕೂಡ ಬಂತು. ಕಳೆದ ಒಂದು ತಿಂಗಳಿಂದಲೂ ನಿರಂತರ ಪ್ರಯತ್ನ ಮಾಡಿದ್ದೇನೆ. ಇನ್ಮುಂದೆ ನಮ್ಮ ರಾಜ್ಯದ ಯಾವುದೇ ಸರ್ಕಾರಿ ಕಚೇರಿ, ಶಾಲೆಗಳಲ್ಲಿ ಯಾವುದೇ ಖಾಸಗಿ ವ್ಯಕ್ತಿ ಬಂದು ಫೋಟೋ ತೆಗಿಯಂಗಿಲ್ಲ. ವಿಡಿಯೋ ಶೂಟ್ ಮಾಡಂಗಿಲ್ಲ. ಮೇಲಾಧಿಕಾರಿಗಳ ಅನುಮತಿ ಇಲ್ಲದೆಯೇ ಯಾವ್ದೇ ಕಚೇರಿಗಳಿಗೆ ಹೋಗಿ ಆ ರೀತಿಯ ಪ್ರಕ್ರಿಯೆಗಳನ್ನು ಮಾಡಬಾರದು ಎಂದು ಸರ್ಕಾರ ನಿರ್ಬಂಧಿಸಿ ಆದೇಶ ಮಾಡ್ತು. ಈಗ ಜಸ್ಟ್ ಆರ್ಡರ್ ಆಯ್ತು.

ಬಹುಶಃ ಯೋಚ್ನೆ ಮಾಡಿ, ಬಹಳಷ್ಟು ಹೆಣ್ಮಕ್ಳು ಹೆಡ್ಡಾಪೀಸ್ಗಳಲ್ಲಿ , ತಾಲೂಕು ಆಫೀಸ್ಗಳಲ್ಲಿ ಜಿಲ್ಲಾ ಪಂಚಾಯ್ತಗಳಲ್ಲಿ ರೆವಿನ್ಯೂ ಅಫೀಸ್ಗಳಲ್ಲಿ, ಜಿಲ್ಲಾ ಕಚೇರಿಗಳಲ್ಲಿ ಕೆಎಸ್ಆರ್ ಪಾರ್ಟಿ, ಸಂಘ ಸಂಸ್ಥೆಗಳು, ವ್ಯಕ್ತಿ ಆಧರಿತ ಸಂಘಟನೆಗಳು ಬರ್ತಾವೆ. ಪೋಟೋ ತೆಗಿತಾರೆ, ವಿಡಿಯೋ ಮಾಡ್ತಾರೆ. ಸ್ವಾಭಿಮಾನದ ಹಕ್ಕುಗಳನ್ನು ಕಿತ್ಕೊಳ್ಳುವಂತ ಕೆಲ್ಸಗಳು ಆ ಸಂದರ್ಭದಲ್ಲಿ ಆಗ್ತಾವೆ. ಲಾಸ್ಟ್ ವೀಕ್ನಲ್ಲಿ ನಾನು ಮುಖ್ಯಮಂತ್ರಿ ಜತೆ ಕಾರಿನಲ್ಲಿ ಹೋಗುವಾಗ ಮಾನ್ಯ ಮುಖ್ಯಮಂತ್ರಿಗಳಲ್ಲಿ ವಿನಂತಿ ಮಾಡ್ದೆ. ಸಾರ್ ಈ ಆದೇಶ ಮಾಡ್ಬೇಕು. ಮುಜುಗರ ಆಗ್ತಾ ಇದೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಆಗ್ತಾ ಇದೆ ಎಂದಾಗ ಮಾನ್ಯ ಮುಖ್ಯಮಂತ್ಇರಗಳು ಆದೇಶ ಮಾಡಿದ್ರು ಎಂದು ಭಾಷಣ ಮಾಡಿದ್ದಾರೆ.

ಸಾರ್ವಜನಿಕರು ಸರ್ಕಾರಿ ಕಚೇರಿಗಳಲ್ಲಿ ಮೊಬೈಲ್ ಮತ್ತು ವಿಡಿಯೋ ಮಾಡುವುದನ್ನು ನಿಷೇಧಿಸಿ ಹೊರಡಿಸಿರುವ ಆದೇಶವು ಸಾರ್ವಜನಿಕರ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗುತ್ತಿದ್ದಂತೆ ಮಧ್ಯ ರಾತ್ರಿಯಲ್ಲಿ ಆದೇಶವನ್ನು ಹಿಂಪಡೆಯಲಾಗಿತ್ತು. ಅದೇ ರೀತಿ ಹೊರಡಿಸಿದ್ದ ಆದೇಶದಲ್ಲಿ ಕಾಗುಣಿತ,ವ್ಯಾಕರಣ ದೋಷಗಳಿದ್ದವು. ಆ ನಂತರ ಅವೆನ್ನಲ್ಲ ಸರಿಪಡಿಸಿ ಮತ್ತೊಂದು ಆದೇಶವೂ ಹೊರಡಿಸಲಾಗಿತ್ತು. ಇದು ಸಾರ್ವಜನಿಕ ವಲಯ ಮತ್ತು ಸಾಮಾಜಿಕ ಜಾಲತಾಣಗಳಲ್ಲಿಯೂ ಟ್ರೋಲ್ ಮಾಡಲಾಗಿತ್ತು.

‘ರಾಜ್ಯದ ಜನರಿಗೆ ಸುಳ್ಳು ಹೇಳಿ ಜನರನ್ನು ದಾರಿತಪ್ಪಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕೂಡಲೇ ರಾಜ್ಯದ ಜನರ ಕ್ಷಮೆ ಕೇಳಬೇಕಕು. ರಾಜ್ಯದ ಮುಖ್ಯಮಂತ್ರಿಯೇ ಸುಳ್ಳುಗಾರ ಎನ್ನುವುದು ರಾಜ್ಯ ರಾಜ್ಯಕಾರಣದ ಅಧೋಗತಿಯನ್ನು ತೋರಿಸುತ್ತದೆ,’ ಎಂದು ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ಅವರು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯಿಸಿದ್ದಾರೆ.

ಕೃಪೆ : ದಿ ಲೈಫ್

Edited By : Nirmala Aralikatti
PublicNext

PublicNext

16/07/2022 09:33 pm

Cinque Terre

67.72 K

Cinque Terre

4

ಸಂಬಂಧಿತ ಸುದ್ದಿ