ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಇಂದು ಮತ್ತೊಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಡಾ. ಗುರ್ಪ್ರೀತ್ ಕೌರ್ ಅವರನ್ನು ಪಂಜಾಬ್ ಸಿಎಂ ಖಾಸಗಿ ಸಮಾರಂಭದಲ್ಲಿ ವರಿಸಲಿದ್ದಾರೆ. ಭಗವಂತ್ ಮಾನ್ ಆರು ವರ್ಷಗಳ ಹಿಂದೆ ವಿಚ್ಛೇದನ ಪಡೆದಿದ್ದರು. ಅವರ ಮೊದಲ ಹೆಂಡತಿ ಮತ್ತು ಮಕ್ಕಳು ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ. ವಿಚ್ಛೇದನದ ನಂತರ ರಾಜಕೀಯ ವೃತ್ತಿ ಜೀವನದಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಮಾನ್ ಈಗ ಮತ್ತೊಮ್ಮೆ ಮದುವೆಯಾಗಲಿದ್ದು, ತಮ್ಮ ವೈವಾಹಿಕ ಜೀವನವನ್ನು ಮತ್ತೊಮ್ಮೆ ಶುರು ಮಾಡಲಿದ್ದಾರೆ. ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡುವಾಗ ಸಮಾರಂಭಕ್ಕೆ ಭಗವಂತ ಮಾನ್ ಅವರ ಮಕ್ಕಳಿಬ್ಬರೂ ಬಂದಿದ್ದರು.
48 ವರ್ಷದ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಇಂದು ಚಂಡೀಗಢದಲ್ಲಿ ನಡೆಯಲಿರುವ ಖಾಸಗಿ ಸಮಾರಂಭದಲ್ಲಿ ಡಾ. ಗುರುಪ್ರೀತ್ ಕೌರ್ ಎಂಬುವರನ್ನು ವರಿಸಲಿದ್ದಾರೆ. ಈ ಹಿಂದೆ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಆಗಿದ್ದ ಮಾನ್, 6 ವರ್ಷಗಳ ಹಿಂದೆ ತಮ್ಮ ಮೊದಲ ಪತ್ನಿಯಿಂದ ಡಿವೋರ್ಸ್ ಪಡೆದುಕೊಂಡಿದ್ದರು. ಮಾನ್ ಮತ್ತು ಗುರುಪ್ರೀತ್ ನಡುವೆ 16 ವರ್ಷಗಳ ವಯಸ್ಸಿನ ಅಂತರವಿದೆ.
ಕುರುಕ್ಷೇತ್ರ ಜಿಲ್ಲೆಯ ಪೆಹೊವಾ ಮೂಲದ ಡಾ. ಗುರುಪ್ರೀತ್ ಕೌರ್ ಅವರ ವಯಸ್ಸು 32. ವೃತ್ತಿಯಲ್ಲಿ ವೈದ್ಯೆಯಾಗಿದ್ದಾರೆ. ಕೌರ್ ಅವರ ತಂದೆ ಇಂದ್ರಜಿತ್ ಸಿಂಗ್ ಓರ್ವ ರೈತ. ಅವರ ತಾಯಿ ರಾಜ್ ಕೌರ್ ಗೃಹಿಣಿ. ಗುರುಪ್ರೀತ್ ಕೌರ್ಗೆ ಇಬ್ಬರು ಸಹೋದರಿಯರಿದ್ದಾರೆ. ಇಬ್ಬರು ಕೂಡ ವಿದೇಶದಲ್ಲಿದ್ದಾರೆ. ಮಾನ್ ಅವರ ನಿಕಟ ಮೂಲಗಳ ಪ್ರಕಾರ, ಎರಡೂ ಕುಟುಂಬಗಳ ನಡುವೆ ಹಲವು ವರ್ಷಗಳಿಂದ ಸಂಬಂಧ ಇದೆ.
PublicNext
07/07/2022 10:38 am