ತಿರುವನಂತಪುರಂ: ಸಂವಿಧಾನದ ವಿರುದ್ಧ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದ ಕೇರಳದ ಸಚಿವ ಸಜಿ ಚೆರಿಯನ್ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಸಿಎಂ ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರ್ಕಾರದ ಮತ್ತೊಂದು ವಿಕೆಟ್ ಬಿದ್ದಂತಾಗಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪಾಲ್ಗೊಂಡಿದ್ದ ಸಿಪಿಎಂ ಸಭೆಯಲ್ಲಿ ಭಾಗವಹಿಸಿದ ನಂತರ ತಾನು ರಾಜೀನಾಮೆ ನೀಡುವುದಿಲ್ಲ ಎಂದು ಮಾಧ್ಯಮದವರಲ್ಲಿ ಸಜಿ ಹೇಳಿದ್ದರು. ಆದರೆ ಸಜಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಿಪಿಎಂನ ಕೇಂದ್ರ ಸಮಿತಿ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹೇಳಿದ್ದರು. ಅದರಂತೆ ಸಜಿ ಚೆರಿಯನ್ ರಾಜೀನಾಮೆ ನೋಡಿದ್ದಾರೆ.
ರಾಜೀನಾಮೆ ಬಳಿಕ ಮಾತಾಡಿದ ಅವರು, ನಾನು ನನ್ನ ಸ್ವಂತ ನಿರ್ಧಾರದಿಂದ ರಾಜೀನಾಮೆ ನೀಡಿದ್ದೇನೆ. ನಾನು ಯಾವತ್ತೂ ಸಂವಿಧಾನವನ್ನು ಅವಮಾನಿಸಿಲ್ಲ. ಭಾರತದ ಸಂವಿಧಾನದ ಬಗ್ಗೆ ನನಗೆ ಅಪಾರ ಗೌರವ ಇದೆ. ಸಿಪಿಐ-ಎಂ ಮತ್ತು ಎಲ್ಡಿಎಫ್ ಅನ್ನು ದುರ್ಬಲವಾಗಿಸುವುದಕ್ಕಾಗಿ ನನ್ನ ಭಾಷಣದ ಕೆಲವು ಭಾಗಗಳನ್ನು ಮಾತ್ರ ಆಯ್ದುಕೊಂಡು ಮಾಧ್ಯಮಗಳು ಪ್ರಸಾರ ಮಾಡಿವೆ ಎಂದು ಚೆರಿಯನ್ ಹೇಳಿಕೆ ನೀಡಿದ್ದಾರೆ.
PublicNext
07/07/2022 08:24 am