ಲಕ್ನೋ: ಸಮಾಜದ ಶಾಂತಿ ಕದಡುವವರ ಮತ್ತು ಹಿಂಸಾತ್ಮಕ ಪ್ರತಿಭಟನೆಗೆ ಕಾರಣವಾಗುವವರ ವಿರುದ್ಧ, ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಬುಲ್ಡೋಜರ್ ಕ್ರಮದ ಬಗ್ಗೆ ದೇಶಾದ್ಯಂತ ಪರ-ವಿರೋಧದ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ಬುಲ್ಡೋಜರ್ ಕ್ರಮವನ್ನು ತೀವ್ರವಾಗಿ ಟೀಕಿಸಿರುವ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಬಿಜೆಪಿಯ ಬುಲ್ಡೋಜರ್‌ನ್ನು ತಡೆಯುವ ಸಾಮರ್ಥ್ಯ ಕೇವಲ ಕಾನೂನು ಹಾಗೂ ಸಂವಿಧಾನಕ್ಕೆ ಮಾತ್ರವಿದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅಖಿಲೇಶ್ ಯಾದವ್, ಪ್ರಯಾಗ್‌ರಾಜ್‌ನಲ್ಲಿ ಬುಲ್ಡೋಜರ್ ಬಳಸಿ ಕೆಡವಲಾದ ಮನೆ ಹಿಂಸಾಚಾರದ ಪ್ರಮುಖ ಆರೋಪಿ ಜಾವೇದ್ ಮೊಹಮ್ಮದ್‌ಗೆ ಸೇರಿದ್ದಲ್ಲ ಎಂಬುದು ಗೊತ್ತಾಗಿದೆ. ಆರೋಪಿಯು ಮನೆಯ ಮಾಲೀಕನಲ್ಲ, ಆ ಮನೆಯು ಹೆಂಡತಿಯ ಹೆಸರಿನಲ್ಲಿದೆ ಎಂದು ಪತ್ರಿಕೆಗಳು ಹೇಳುತ್ತಿವೆ. ಹಾಗಾದರೆ ಸರ್ಕಾರ ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತದೆಯೇ ಎಂಬುದು ಪ್ರಶ್ನೆ. ಮತ್ತು ಮನೆಯ ಮೇಲೆ ಬುಲ್ಡೋಜರ್ ಓಡಿಸಿ ನಿರ್ನಾಮ ಮಾಡಿದ ಅಧಿಕಾರಿಗಳು ಅದನ್ನು ಮರುನಿರ್ಮಾಣ ಮಾಡುತ್ತಾರೆಯೇ? ಎಂದು ಸರ್ಕಾರವನ್ನು ಕೇಳಿದ್ದಾರೆ.
ನಿರ್ದೋಷಿಗಳನ್ನು ಹೀಗೆ ಸತಾಯಿಸುತ್ತಿರುವ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ನಾಚಿಕೆಯಾಗಬೇಕು. ನಮ್ಮ ಸಂವಿಧಾನ ಮತ್ತು ಈ ನೆಲದ ಕಾನೂನು ಬಿಜೆಪಿಯ ಬುಲ್ಡೋಜರ್‌ನ್ನು ತಡೆಯುತ್ತದೆ ಎಂಬುದರಲ್ಲಿ ಯಾವುದೇ ಸಂದೇಹ ಬೇಡ. ಬುಲ್ಡೋಜರ್ ಕ್ರಮದ ಹೆಸರಿನಲ್ಲಿ ಕಾನೂನನ್ನು ಗಾಳಿಗೆ ತೂರುತ್ತಿರುವ ಯೋಗಿ ಸರ್ಕಾರದ ಆಟ ಬಹಳ ದಿನ ನಡೆಯುವುದಿಲ್ಲ ಎಂದು ಹರಿಹಾಯ್ದಿದ್ದಾರೆ.
ನೂಪುರ್ ಶರ್ಮಾ ಅವರ ವಿವಾದಾತ್ಮಕ ಹೇಳಿಕೆ ಕುರಿತು ಅಖಿಲೇಶ್ ಯಾದವ್ ಮಾತನಾಡಿ “ನಾನು ಒಂದು ವಿಷಯವನ್ನು ಸ್ಪಷ್ಟಪಡಿಸಲು ಬಯಸುತ್ತೇನೆ, ನಿಜವಾದ ಹಿಂದೂ ಯಾವುದೇ ಧರ್ಮದ ಬಗ್ಗೆ ಏನನ್ನೂ ಹೇಳುವುದಿಲ್ಲ, ಅವರು ಯಾರನ್ನೂ ಅವಮಾನಿಸುವುದಿಲ್ಲ, ಸಂವಿಧಾನವು ಅದಕ್ಕೆ ಅವಕಾಶವನ್ನೂ ನೀಡುವುದಿಲ್ಲ, ಕಾನೂನು ಅನುಮತಿಸುವುದಿಲ್ಲ ಎಂದರು.
PublicNext
16/06/2022 10:06 am